ನವದೆಹಲಿ: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಯುರೋಪಿಯನ್ ಬಳಕೆದಾರರಿಗೆ ಹೋಲಿಸಿದರೆ ಭಾರತೀಯರ ಗೌಪ್ಯತೆ ಗುಣಮಟ್ಟ ಕಡಿಮೆ ಎಂದು ಆರೋಪಿಸಿದ್ದು ಮನವಿಗೆ ನಾಲ್ಕು ವಾರಗಳಲ್ಲಿ ಕೇಂದ್ರ ಮತ್ತು ವಾಟ್ಸಾಪ್ ಉತ್ತರಿಸಬೇಕೆಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಜನರು ತಮ್ಮ ಗೌಪ್ಯತೆಯಿಂದ ವಂಚಿತರಾಗುತ್ತಾರೆ ಎಂಬ ಆತಂಕ ಎದುರಾಗಿದ್ದು ನಾವು ಅದನ್ನು ರಕ್ಷಿಸುವುದು ಅಗತ್ಯ ಎಂದು ಉನ್ನತ ನ್ಯಾಯಾಲಯ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ 2017ರಿಂದ ಬಾಕಿ ಇರುವ ಕರ್ಮಣ್ಯ ಸಿಂಗ್ ಸರೀನ್ ಸಲ್ಲಿಸಿದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿ ಕೇಂದ್ರ ಸರ್ಕಾರ ಹಾಗೂ ಫೇಸ್‌ಬುಕ್ ಒಡೆತನದ ಆಯಪ್‌ಗೆ ನೋಟಿಸ್ ನೀಡಿದೆ.
ಟ್ರಿಲಿಯನ್ಗಟ್ಟಲೆ ಇರಬಹುದಾದ ಕಂಪನಿಯ ಮೌಲ್ಯಕ್ಕಿಂತ ಜನರು ತಮ್ಮ ಗೌಪ್ಯತೆಯನ್ನು ಹೆಚ್ಚು ಗೌರವಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯುರೋಪ್ ಗೌಪ್ಯತೆ ಕುರಿತು ವಿಶೇಷ ಕಾನೂನು ಹೊಂದಿದೆ ಮತ್ತು ಭಾರತವು ಇದೇ ರೀತಿಯ ಕಾನೂನು ಹೊಂದಿದ್ದರೆ ಅದನ್ನು ನಾವೂ ಅನುಕರಿಸುತ್ತೇವೆಎಂದು ವಾಟ್ಸಾಪ್ ಉನ್ನತ ನ್ಯಾಯಾಲಯಕ್ಕೆ ಈ ವೇಳೆ ತಿಳಿಸಿದೆ.