ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕಿಗೆ ರಾಮಬಾಣ ಎಂದೇ ಹೇಳಲಾಗುತ್ತಿರುವ ಕೋವಿಡ್ ಲಸಿಕೆಗಳು ಮಾರುಕಟ್ಟೆಯಲ್ಲಿ ಯಾವಾಗ ಲಭಿಸುತ್ತದೆ ಎಂಬ ಪ್ರಶ್ನೆಗೆ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಸ್ಪಷ್ಟನೆ ನೀಡಿದ್ದಾರೆ,
ದೆಹಲಿಯಲ್ಲಿ ಇಂದು ತಮ್ಮ 2ನೇ ಡೋಸ್ ಕೋವಿಡ್ ಲಸಿಕೆ ಪಡೆದ ಏಮ್ಸ್ ನಿರ್ದೇಶಕ ಡಾ. ಆರ್ ಗುಲೇರಿಯಾ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎಲ್ಲ ಆರೋಗ್ಯ ಕಾರ್ಯಕರ್ತರು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಲಸಿಕೆ ಪಡೆಯಬೇಕು ಎಂದು ಹೇಳಿದರು.
ಇದೇ ವೇಳೆ ಕೋವಿಡ್ ಲಸಿಕೆ ಯಾವಾಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಕೇಂದ್ರ ಸರ್ಕಾರದ ಯೋಜನೆಯಂತೆ ಯಾರು ಯಾರಿಗೆ ಕೋವಿಡ್ ಲಸಿಕೆ ದೊರೆಯಬೇಕು ಎಂದು ಯೋಜಿಸಲಾಗಿದೆಯೋ ಅವರೆಲ್ಲರಿಗೂ ಲಸಿಕೆ ದೊರೆತ ಬಳಿಕವಷ್ಟೇ ಕೋವಿಡ್ ಲಸಿಕೆ ಮುಕ್ತ ಮಾರುಕಟ್ಟೆಯಲ್ಲಿ ದೊರೆಯಬಹುದು ಎಂದು ಹೇಳಿದರು. ಅಂತೆಯೇ ಆಶಾದಾಯಕ ವಿಚಾರವೆಂದರೆ ವರ್ಷಾಂತ್ಯದ ಹೊತ್ತಿಗೆ ನಿಗದಿತ ಗುರಿ ಸಾಧಿಸುವ ವಿಶ್ವಾಸವಿದೆ. ಮುಂದಿನ ವರ್ಷದಿಂದ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗಬಹುದು ಎಂದೂ ಅವರು ಹೇಳಿದರು.