ಕಾಸರಗೋಡು: ಕೋವಿಡ್ ತಪಾಸಣೆ ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ದಿನವೊಂದಕ್ಕೆ ಒಂದು ವಾರ್ಡಿನಲ್ಲಿ ಕುಟುಂಬವೊಂದರ ಸದಸ್ಯರ ತಪಾಸಣೆ ನಡೆಸಬೇಕು ಎಂದು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ತೀರ್ಮಾನಿಸಿದೆ.
ಬುಧವಾರ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಜರುಗಿದ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಸತತವಾಗಿ 14 ದಿನಗಳ ಕಾಲ ಅತ್ಯಧಿಕ ಪ್ರಮಾಣದಲ್ಲಿ ಕುಟುಂಬಗಳ ಸದಸ್ಯರನ್ನು ತಪಾಸಣೆಗೆ ಹಾಜರುಪಡಿಸುವ ಗ್ರಾಮ ಪಂಚಾಯತ್ ಗಳಿಗೆ ಬಹುಮಾನ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ತಿಂಗಳಿಗೊಮ್ಮೆ ಶಿಕ್ಷಕರು, ವಿದ್ಯಾರ್ಥಿಗಳು ಕೋವಿಡ್ ತಪಾಸಣೆಗೆ ಒಳಗಾಗಬೇಕು. ಜಿಲ್ಲಾಧಿಕಾರಿ (ಆರೋಗ್ಯ) ಸ್ಥಳೀಯಾಡಳಿತ ಸಂಸ್ಥೆಗಳೊಂದಿಗೆ ಸಹಕರಿಸಿ ತಪಾಸಣೆಗೆ ಸೌಲಭ್ಯ ಒದಗಿಸಬೇಕು. ಸರಕಾರಿ ಕಚೇರಿಗಳ ಸಿಬ್ಬಂದಿ ಕೋವಿಡ್ ತಪಾಸಣೆ ಚಾಲೆಂಜ್ ವಹಿಸಿಕೊಳ್ಳಬೇಕು. ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ತಪಾಸಣೆಗೊಳಗಾಗಿ ನೆಗೆಟಿವ್ ಸರ್ಟಿಫಿಕೆಟ್ ಇರಿಸಿಕೊಳ್ಳಬೇಕು. ಕಾಸರಗೋಡು, ಕಾಞಂಗಾಡ್, ನೀಲೇಶ್ವರ ನಗರಸಭೆಗಳ ವ್ಯಾಪ್ತಿಯ ಎಲ್ಲ ಅಂಗಡಿಗಳ ಸಿಬ್ಬಂದಿ ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಇರಿಸಿಕೊಳ್ಳಬೇಕು. ಇದರ ಖಚಿತತೆಯ ಹೊಣೆಯನ್ನು ನಗರಸಭೆಯ ಕಾರ್ಯದರ್ಶಿಗಳು ವಹಿಸಬೇಕು ಎಂದು ಸಭೆ ತಿಳಿಸಿದೆ.
ಕಾಲ್ ಎಟ್ ಸ್ಕೂಲ್ ಯೋಜನೆ ಚುರುಕುಗೊಳಿಸಲು ಮತ್ತು ಕಾಲ್ ಎಟ್ ಕಾಲೇಜ್ ಯೋಜನೆ ಆರಂಭಿಸುವ ನಿಟ್ಟಿನಲ್ಲಿ ಶೀಘ್ರವೇ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಹೊಣೆಯನ್ನು ಶಿಕ್ಷಣ ಉಪನಿರ್ದೇಶಕಿ ಅವರಿಗೆ ನೀಡಲಾಗಿದೆ. ಆರ್.ಟಿ.ಪಿ.ಸಿ.ಆರ್. ತಪಾಸಣೆಗಾಗಿ ಜಿಲ್ಲೆಯಲ್ಲಿ ಲ್ಯಾಬ್ ಗಳು ಕಡಿಮೆಯಿದ್ದ, ಇರುವ ಲ್ಯಾಬ್ ಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಲಾಗುವುದು.
ಪಂದ್ಯಾಟಗಳಿಗೆ ಅನುಮತಿಯಿಲ್ಲ :
ಕೋವಿಡ್ ಸಂಹಿತೆಗಳನ್ನು ಉಲ್ಲಂಘಿಸಿ ಕ್ರೀಡಾ ಪಂದ್ಯಾಟಗಳನ್ನು ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲು ಪೋಲೀಸರಿಗೆ ಜಿಲ್ಲಾಧಿಕಾರಿ ಆದೇಶಿಸಿದರು.
ಸತತ ತಪಾಸಣೆ ನಡೆಸಿಕೊಂಡು ಬರುತ್ತಿರುವ ಪರಿಣಾಮ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆ ಕಡಿಮೆಯಾಗಲು ಕಾರಣವಾಗಿದೆ ಎಂದು ಜಿಲ್ಲೆಯ ಹೊಣೆಗಾರಿಕೆಯ ನೋಡೆಲ್ ಅಧಿಕಾರಿ ಜಾಫರ್ ಮಲಿಕ್ ತಿಳಿಸಿದರು.
ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್ ನಾಥ್, ಡಿ.ವೈ.ಎಸ್.ಪಿ. ಜೈಸನ್ ಕೆ. ಅಬ್ರಾಹಂ, ಡಿ.ಡಿ.ಇ. ಕೆ.ವಿ.ಪುಷ್ಪಾ ಉಪಸ್ಥಿತರಿದ್ದರು.