ಉಪ್ಪಳ: ಬದಲಾಗುತ್ತಿರುವ ಇಂದಿನ ಹವಾಮಾನ ವೈಪರೀತ್ಯದ ವಿರುದ್ದ ಹೋರಾಡಲು ಸೌರಶಕ್ತಿಯೊಂಣದೇ ಪರಿಹಾರ ಮಾರ್ಗ ಎಮದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಸೌರ ಉದ್ಯಾನ ಯೋಜನೆಯ ಅಂಗವಾಗಿ ಪೈವಳಿಕೆ ಸಮೀಪದ ಕೊಮ್ಮಂಗಳದಲ್ಲಿ 250 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ 50 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಶುಕ್ರವಾರ ಸಂಜೆ ರಾಷ್ಟ್ರಕ್ಕೆ ಅರ್ಪಿಸಿ ಪ್ರಧಾನಿ ಮಾತನಾಡಿದರು.
ಕಾಸರಗೋಡಿಗೆ ಶುದ್ಧ ಮತ್ತು ಹಸಿರು ಶಕ್ತಿಯನ್ನು ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಭಾರತವು ಸೌರಶಕ್ತಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಮುಂದಿನ ದಿನಗಳಲ್ಲಿ ನೀಡುತ್ತಿದೆ. ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದನೆ 30 ಪಟ್ಟು ಹೆಚ್ಚಳಗೊಂಡಿದೆ ಎಂದು ಪ್ರಧಾನಿ ಹೇಳಿದರು.
ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುಖ್ಯ ಅತಿಥಿಗಳಾಗಿದ್ದರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇರಳದ ಇಂಧನ ಕ್ಷೇತ್ರದಲ್ಲಿ ಭಾರಿ ಏರಿಕೆ ಕಂಡುಬಂದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. 50 ಮೆಗಾವ್ಯಾಟ್ ಸೌರ ವಿದ್ಯುತ್ ಯೋಜನೆಯನ್ನು 2017 ರಲ್ಲಿ ಕಾಸರಗೋಡು ಅಂಬಲತ್ತರದಲ್ಲಿ ಉದ್ಘಾಟಿಸಲಾಗಿತ್ತು. ಪೈವಳಿಕೆಯಲ್ಲಿ ಈಗ ಎರಡನೆಯದಾದ 50 ಮೆಗಾವ್ಯಾಟ್ ಯೋಜನೆ ಪೂರ್ಣಗೊಂಡಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.
ಕೇಂದ್ರ ವಿದ್ಯುತ್ ಖಾತೆ ರಾಜ್ಯ ಸಚಿವ ಆರ್.ಕೆ.ಸಿಂಗ್, ಕೇಂದ್ರ ಗೃಹ ವ್ಯವಹಾರ ಮತ್ತು ನಗರ ವ್ಯವಹಾರ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜ್ಯ ವಿದ್ಯುತ್ ಸಚಿವ ಎಂ.ಎಂ.ಮಣಿ, ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್, ಟಿಎಚ್‍ಡಿಸಿ ಇಂಡಿಯಾ ಲಿಮಿಟೆಡ್ ಸಿಎಂಡಿ ಡಿ.ವಿ. ಸಿಂಗ್, ಆರ್‍ಪಿಸಿಕೆಎಲ್ ಸಿಇಒ ಅಗಸ್ಟೀನ್ ಥಾಮಸ್, ಟಿಎಚ್‍ಡಿಸಿ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಯು.ಸಿ. ಕನೌಜಿಯಾ, ನಿರ್ದೇಶಕರು ಜೆ. ಬೆಹ್ರಾ, ಆರ್.ಕೆ. ಮತ್ತು ವಿಷ್ಣೋಯಿ ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯಲ್ಲಿ ಪೈವಳಿಕೆ, ಮೀಂಜ, ಚಿಪ್ಪಾರು ಗ್ರಾಮಗಳಲ್ಲಿ ಕೇರಳ ಇಲೆಕ್ಟ್ರಿಸಿಟಿ ಬೋರ್ಡ್(ಕೆಎಸ್‍ಇಬಿ)ಮೂಲಕ ಸರ್ಕಾರ ಒದಗಿಸಿದ 250 ಎಕ್ರೆ ನಿವೇಶನದಲ್ಲಿ ಕೇಂದ್ರ ಸರ್ಕಾರದ 288 ಕೋಟಿ. ರೂ. ವ್ಯಯಿಸಿ ಕೇಂದ್ರ ಸಾರ್ವಜನಿಕ ವಲಯದ ಟಿಎಚ್‍ಡಿಸಿ ಇಂಡಿಯಾ ಲಿಮಿಟೆಡ್ ಸೌರ ಶಕ್ತಿ ಪಾರ್ಕ್ ನಿರ್ಮಿಸಿದೆ. ಈ ಯೋಜನೆಯು 165149 ಮಲ್ಟಿ-ಕ್ರಿಸ್ಟಲ್ ಮೂಲಕ ಸೌರ ಪಿವಿ ಮಾಡ್ಯೂಲ್‍ಗಳನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಉತ್ಪಾದಿಸುತ್ತದೆ. ಒಪ್ಪಂದದ ಪ್ರಕಾರ, ಕೆಎಸ್‍ಇಬಿ ವಿದ್ಯುತ್ ಅನ್ನು ಪ್ರತಿ ಕಿಲೋವ್ಯಾಟ್ ಗಂಟೆಗೆ 3.10 ರೂ. ಮಾರಾಟಗೈಯ್ಯಲಿದೆ. ಇಲ್ಲಿಂದ ಉತ್ಪತ್ತಿಯಾಗುವ ಶಕ್ತಿಯನ್ನು ಎರಡು 33 ಕೆವಿ ಫೀಡರ್‍ಗಳು ಮತ್ತು ಎರಡು 25 ಎಂವಿಎ ಟ್ರಾನ್ಸ್‍ಫಾರ್ಮರ್‍ಗಳ ಮೂಲಕ ಕುಬಣೂರು 110 ಕೆವಿ ಸಬ್‍ಸ್ಟೇಷನ್‍ಗೆ ರವಾನಿಸಲಾಗುತ್ತದೆ. ಈ ಯೋಜನೆಯನ್ನು ಟಾಟಾ ಪವರ್ ಸೋಲಾರ್ ನಿರ್ಮಿಸಿದೆ.