ತಿರುವನಂತಪುರ: ರಾಜ್ಯದ ವಿಧಾನಸಭಾ ಚುನಾವಣೆ ಪ್ರಚಾರ ಕಣ ರಂಗೇರುವ ಸೂಚನೆಯಿದ್ದು, ಚುನಾವಣಾ ಪ್ರಚಾರದ ಚಾಲನೆಗೆ ಬಿಜೆಪಿ ಅಖಿಲ ಭಾರತ ಅಧ್ಯಕ್ಷ ಜೆ.ಪಿ.ನಡ್ಡ ಮಾರ್ಚ್ 3 ಮತ್ತು 4 ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಪಕ್ಷದ ಸಭೆಗಳ ಜೊತೆಗೆ ಪ್ರಮುಖ ವ್ಯಕ್ತಿಗಳು ಮತ್ತು ಸಮುದಾಯದ ಮುಖಂಡರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಾ.3 ರಂದು ಮಧ್ಯಾಹ್ನ 3 ಗಂಟೆಗೆ ತಿರುವನಂತಪುರ ವಿಮಾನ ನಿಲ್ದಾಣಕ್ಕೆ ಆಗಮಿಸುವ ನಡ್ಡಾರನ್ನು ಪಕ್ಷದ ನೇತಾರರು, ಕಾರ್ಯಕರ್ತರು ಸ್ವಾಗತಿಸುವರು. ಪಕ್ಷದ ಸ್ಥಳೀಯ ಪದಾಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಸಭೆಯಲ್ಲಿ ಅಖಿಲ ಭಾರತ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಜೆ.ಪಿ.ನಡ್ಡಾ ಅವರು ಸಂಜೆ 4 ಗಂಟೆಗೆ ತ್ರಿಶೂರ್‍ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಮಾಹಿತಿ ನೀಡಿರುವರು.