HEALTH TIPS

ಕೋವಿಡ್ ನಿಯಮಾವಳಿ ಅನುಸರಿಸುವಲ್ಲಿ ಜನರ ಅಸಡ್ಡೆ-ಸಮೀಕ್ಷೆ

       ನವದಹಲಿ: ಕೋವಿಡ್-19 ನಿಯಮಾವಳಿಗಳನ್ನು ಅನುಸರಿಸುವಲ್ಲಿ ದೇಶದ ಜನರು ಉದಾಸೀನತೆ ತೋರುತ್ತಿದ್ದಾರೆ. ಮಾಸ್ಕ್ ಧರಿಸುವುದು ಮತ್ತು ಅಂತರವನ್ನು ಕಾಪಾಡಿಕೊಳ್ಳುವ ಸೂಚನೆಗಳನ್ನು ಪಾಲಿಸುವವರು ಕಡಿಮೆ ಎಂಬ ಅಂಶಗಳು 'ಲೋಕಲ್ ಸರ್ಕಲ್ಸ್' ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿವೆ.

          ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಮಾಸ್ಕ್ ಧರಿಸುವಿಕೆ ಪರಿಣಾಮಕಾರಿಯಾಗಿ ನಡೆಯುತ್ತಿದೆ ಎಂದು ಹೇಳಿದವರ ಪ್ರಮಾಣ ಶೇ 30 ಮಾತ್ರ. ಕಳೆದ ಸೆಪ್ಟೆಂಬರ್‌ನಲ್ಲಿ ಹೀಗೆಂದವರ ಪ್ರಮಾಣ ಶೇ 67 ಇತ್ತು. ವ್ಯಕ್ತಿಗತ ಅಂತರವನ್ನು ಪರಿಣಾಮಕಾರಿಯಾಗಿ ಪಾಲಿಸಲಾಗುತ್ತಿದೆ ಎಂದವರ ಪ್ರಮಾಣ 12% ಮಾತ್ರ.

       ಸ್ಥಳಗಳ ಆಧಾರದ ಮೇಲೆ ದತ್ತಾಂಶವನ್ನು ವಿಶ್ಲೇಷಿಸಿದಾಗ, ಮೊದಲ ಹಂತದ ನಗರಗಳಲ್ಲಿ ಮಾಸ್ಕ್ ನಿಯಮ ಪಾಲನೆ ಪರಿಣಾಮಕಾರಿಯಾಗಿ ಆಗುತ್ತಿದೆ ಎಂದು ಹೇಳುವ ನಾಗರಿಕರು ಶೇ 35ರಷ್ಟು ಇದ್ದಾರೆ. ಎರಡನೇ ಶ್ರೇಣಿಯ ನಗರಗಳಲ್ಲಿ ಪರಿಣಾಮಕಾರಿ ಎಂದು ಹೇಳಿದವರು ಶೇ 29%. ಮೂರನೇ ಹಾಗೂ ನಾಲ್ಕನೇ ಹಂತದ ನಗರಗಳು ಮತ್ತು ಗ್ರಾಮೀಣ ಭಾಗದಲ್ಲಿ ಹೀಗೆ ಹೇಳಿದವರ ಪ್ರಮಾಣ ಶೇ 19ರಷ್ಟಿದೆ.

      ಮಹಾನಗರಗಳಿಗೆ ಹೋಲಿಸಿದರೆ ನಗರ ಮತ್ತು ಗ್ರಾಮೀಣ ಭಾರತದಲ್ಲಿ ಮಾಸ್ಕ್ ಧರಿಸುವಿಕೆಯು ಕಡಿಮೆಯಾಗುತ್ತಿದೆ ಎಂದು ಈ ದತ್ತಾಂಶಗಳು ಸೂಚಿಸುತ್ತವೆ ಎಂದು ಸಮೀಕ್ಷೆ ತಿಳಿಸಿದೆ.

ಮಾರ್ಗಸೂಚಿ ಅನುಸರಣೆಯಲ್ಲಿನ ಕುಸಿತವು ಪ್ರಪಂಚದ ಅನೇಕ ದೇಶಗಳಲ್ಲಿ ಕಂಡುಬಂದಿದೆ. ಆದರೆ ಮಾಸ್ಕ್‌ಗಳ ಗುಣಮಟ್ಟವನ್ನು ಕೆಎನ್-95 ಅಥವಾ ಎನ್-95ಗೆ ಹೆಚ್ಚಿಸಿಕೊಂಡಿದ್ದಾರೆ. ಕೆಲವರು ರಕ್ಷಣೆಗಾಗಿ ದ್ವಿಪದರದ ಮುಖಗವಸುಗಳನ್ನು ಧರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

        ಮಾಸ್ಕ್ ಧರಿಸದೇ ಇರುವುದಕ್ಕೆ ನಾಗರಿಕರು ಹಲವು ಕಾರಣಗಳನ್ನು ಮುಂದಿಟ್ಟಿದ್ದಾರೆ. ಮಾಸ್ಕ್ ಧರಿಸಿದರೆ ಆರಾಮದಾಯಕ ಎನಿಸುವುದಿಲ್ಲ, ಸ್ಥಳೀಯ ಅಧಿಕಾರಿಗಳು ಮಾಸ್ಕ್ ಧರಿಸುವಿಕೆ ಮೇಲೆ ನಿಗಾ ಇರಿಸಿಲ್ಲ ಮತ್ತು ತಮ್ಮ ಪ್ರದೇಶದಲ್ಲಿ ಕೋವಿಡ್ ಪ್ರಕಣಗಳು ಕಡಿಮೆಯಾಗಿರುವುದರಿಂದ ಮಾಸ್ಕ್ ಧರಿಸಿಲ್ಲ ಎಂಬ ಕಾರಣ ನೀಡಿದ್ದಾರೆ.

       ಅಂತರ ಕಾಯ್ದುಕೊಳ್ಳುವಿಕೆ: ಮೊದಲ ಶ್ರೇಣಿ ನಗರಗಳಲ್ಲಿ ಅಂತರ ಕಾಯ್ದುಕೊಳ್ಳುವಿಕೆ ಪಾಲನೆ ಶೇ 15ರಷ್ಟಿದೆ. ಎರಡನೇ ಹಂತದ ನಗರಗಲ್ಲಿ ಶೇ 10, ಮೂರನೇ, ನಾಲ್ಕನೇ ಹಾಗೂ ಗ್ರಾಮೀಣ ಭಾಗದಲ್ಲಿ ಶೇ 7.5ರಷ್ಟಿದೆ ಎಂದು ಸಮೀಕ್ಷೆ ಹೇಳಿದೆ.

     ಸರ್ಕಾರವು ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದ್ದರಿಂದ ಸಾಂಕ್ರಾಮಿಕ ರೋಗವು ಹತೋಟಿಯಲ್ಲಿದೆ ಎಂಬ ಭಾವವು ಜನರಲ್ಲಿ ಮೂಡಿದೆ ಎಂದು ವರದಿ ಹೇಳಿದೆ.

ಪಂಜಾಬ್‌: ಹೆಚ್ಚು ಜನ ಸೇರುವಂತಿಲ್ಲ

       ಸಮಾರಂಭಗಳಲ್ಲಿ ಜನರು ಸೇರುವುದರ ಮೇಲೆ ಮಾರ್ಚ್ 1ರಿಂದ ನಿರ್ಬಂಧ ವಿಧಿಸಲು ಪಂಜಾಬ್ ಸರ್ಕಾರ ಮಂಗಳವಾರ ಆದೇಶಿಸಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ.

       ಒಳಾಂಗಣದಲ್ಲಿ ಗರಿಷ್ಠ 100 ಹಾಗೂ ಹೊರಾಂಗಣದಲ್ಲಿ ನಡೆಯವ ಸಮಾರಂಭಗಳಲ್ಲಿ ಗರಿಷ್ಠ 200 ಜನರು ಮಾತ್ರ ಸೇರಲು ಅವಕಾಶವಿದೆ. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಗತ್ಯವಿದ್ದಲ್ಲಿ ತಮ್ಮ ಜಿಲ್ಲೆಗಳ ಕೋವಿಡ್ ಹಾಟ್‌ಸ್ಪಾಟ್‌ಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

                          ಔರಂಗಾಬಾದ್‌ನಲ್ಲಿ ರಾತ್ರಿ ಕರ್ಫ್ಯೂ

        ಕಳೆದ ಕೆಲವು ದಿನಗಳಿಂದ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಮಹಾರಾಷ್ಟ್ರದ ಔರಂಗಾಬಾದ್‌ ನಗರದಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮಾರ್ಚ್ 8 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ.

ಹೊಸ ತಳಿ ಕಾರಣವಲ್ಲ: ಕೇರಳ, ಮಹಾರಾಷ್ಟ್ರದಲ್ಲಿ ದಿಢೀರನೆ ಪ್ರಕರಣಗಳು ಏರಿಕೆಯಾಗಲು ರೂಪಾಂತರಗೊಂಡ ಕೊರೊನಾ ವೈರಾಣು ಕಾರಣವಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.

        ದೇಶದಲ್ಲಿ ಬ್ರಿಟನ್ ರೂಪಾಂತರ ವೈರಾಣು 187 ಜನರಲ್ಲಿ ಕಂಡುಬಂದಿದೆ. ದಕ್ಷಿಣ ಆಫ್ರಿಕಾದ ರೂಪಾಂತರ ವೈರಾಣು 6 ಜನರಿಗೆ, ಒಬ್ಬ ವ್ಯಕ್ತಿಯಲ್ಲಿ ಬ್ರೆಜಿಲ್ ರೂಪಾಂತರ ವೈರಸ್ ದೃಢಪಟ್ಟಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್ ತಿಳಿಸಿದ್ದಾರೆ. ಮಹಾರಾಷ್ಟ್ರ, ತೆಲಂಗಾಣ ಹಾಗೂ           ಕೇರಳದಲ್ಲಿ ರೂಪಾಂತರ ವೈರಾಣು ಪತ್ತೆಯಾಗಿವೆ.

                             21 ರಾಜ್ಯಗಳಲ್ಲಿ ಸಾವು ಇಲ್ಲ

         ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1.5 ಲಕ್ಷಕ್ಕಿಂತ ಕಡಿಮೆಯಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 24 ಗಂಟೆಗಳಲ್ಲಿ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್‌ನಿಂದ ಯಾರೂ ಮೃತಪಟ್ಟಿಲ್ಲ ಎಂದು ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries