ನವದೆಹಲಿ: 'ಸಂಸದರು ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಭಾಷೆಗಳ ಪ್ರಚಾರಕ್ಕಾಗಿ ಅಗತ್ಯ ಕಾರ್ಯಗಳನ್ನು ಕೈಗೊಳ್ಳಬೇಕು' ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ತಿಳಿಸಿದ್ದಾರೆ.
ಫೆ. 21 ರಂದು 'ಅಂತರರಾಷ್ಟ್ರೀಯ ಮಾತೃ ಭಾಷಾ ದಿನ'ವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರು ಸಂಸದರಿಗೆ ಮೂರು ಪುಟಗಳ ಪತ್ರ ಬರೆದಿದ್ದಾರೆ.
'ನಾವು ಮೊದಲು ಕಲಿತ ಮತ್ತು ಮಾತನಾಡುವ ಮಾತೃ ಭಾಷೆಯೇ ನಮ್ಮ ಜೀವನದ ಆತ್ಮ. ಹಾಗಾಗಿ ಅದನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು' ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
'ಮಾತೃಭಾಷೆಯು ಮಗುವಿಗೆ ಜಗತ್ತಿನಲ್ಲಿ ಮೊದಲ ಹೆಜ್ಜೆ ಇಡಲು ಸಹಕರಿಸುತ್ತದೆ. ಮನೆಯಲ್ಲಿ ಮಾತನಾಡುವ ಮಾತೃ ಭಾಷೆ ನಮ್ಮ ಸಾಹಿತ್ಯ ಕೌಶಲ, ಶೈಕ್ಷಣಿಕ ಜ್ಞಾನವನ್ನು ಹೆಚ್ಚಿಸುತ್ತದೆ. ಅಲ್ಲದೆ ಇನ್ನೊಂದು ಭಾಷೆಯನ್ನು ಕಲಿಯಲು ಕೂಡ ನೆರವಾಗುತ್ತದೆ' ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
'ನಮ್ಮ ಮಾತೃ ಭಾಷೆ ಮತ್ತು ಸ್ಥಳೀಯ ಭಾಷೆಯನ್ನು ನಿರ್ಲಕ್ಷ್ಯಿಸಿದರೆ, ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಈ ಭಾಷೆಯೊಂದಿಗೆ ಹೊಂದಿಕೊಂಡಿರುವ ಸಂಸ್ಕೃತಿಗಳ ಬಗ್ಗೆಯೂ ನಮಗೆ ಮಾಹಿತಿ ಇರುವುದಿಲ್ಲ. ಇದರಿಂದ ಜ್ಞಾನದ ಕೊರತೆ ಉಂಟಾಗುತ್ತದೆ. ಹಾಗಾಗಿ ಸಂಸದರು ತಮ್ಮ ಕ್ಷೇತ್ರದ ಸ್ಥಳೀಯ ಭಾಷೆ, ಮಾತೃ ಭಾಷೆಯನ್ನು ಪ್ರೋತ್ಸಾಹಿಸಬೇಕು. ಅದನ್ನು ಇನ್ನಷ್ಟು ಪ್ರಚಾರ ಮಾಡಬೇಕು' ಎಂದು ತಿಳಿಸಿದ್ದಾರೆ.
ಸುಮಾರು 200 ಭಾರತೀಯ ಭಾಷೆಗಳು ಅಳಿವಿನಂಚಿನಲ್ಲಿವೆ ಎಂದು ನಾಯ್ಡು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪ್ರತಿ ಎರಡು ವಾರಗಳಿಗೊಮ್ಮೆ ಒಂದು ವಿಶ್ವ ಭಾಷೆ ಅಳಿವಿನಂಚು ತಲುಪುತ್ತಿರುವ ಬಗ್ಗೆ ವಿಶ್ವ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ ಎಂದೂ ಹೇಳಿದ್ದಾರೆ.