ನವದೆಹಲಿ: ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಅತ್ಯಂತ ಹಳೆಯ ಪಕ್ಷದ ರಾಜ್ಯಸಭೆ ಮತ್ತು ಲೋಕಸಭಾ ಘಟಕಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಆರೋಪಿಸಿದರು.
ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ಮೋದಿ, ಕಾಂಗ್ರೆಸ್ ಪಕ್ಷದಲ್ಲಿ ಒಡಕು ಮೂಡಿದ್ದು, "ಗೊಂದಲಕ್ಕೊಳಗಾಗಿದೆ". ಹೀಗಾಗಿ ಈ ಪಕ್ಷದಿಂದ ಯಾವುದೇ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ ಅಥವಾ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಪ್ರಧಾನಿ ಮೋದಿ ಅವರು ಮೂರು ಹೊಸ ಕೃಷಿ ಕಾಯ್ದೆಗಳ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಮೋದಿ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದರು, ಮೋದಿ ಭಾಷಣವನ್ನು ಉಲ್ಲಂಘಿಸಿ ಅಧಿವೇಶನದಿಂದ ಹೊರನಡೆದರು.
"ಸುಮಾರು ಆರು ದಶಕಗಳ ಕಾಲ ದೇಶವನ್ನು ಆಳಿದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಪಕ್ಷದ ಸ್ಥಿತಿ ಈಗ ಅತ್ಯಂತ ಕೆಟ್ಟದ್ದಾಗಿದ್ದು, ಅದರ ರಾಜ್ಯಸಭಾ ಘಟಕ ಒಂದು ದಿಕ್ಕಿನಲ್ಲಿ ಸಾಗಿದರೆ, ಲೋಕಸಭಾ ಘಟಕ ಇನ್ನೊಂದು ದಿಕ್ಕಿನಲ್ಲಿ ಸಾಗುತ್ತಿದೆ" ಎಂದರು. ಅಂತಹ "ವಿಭಜಿತ" ಮತ್ತು "ಗೊಂದಲಕ್ಕೊಳಗಾದ" ಪಕ್ಷದಿಂದ ತನಗೆ ಅಥವಾ ದೇಶದ ಸಮಸ್ಯೆಗಳಿಗೆ ಯಾವುದೇ ಪರಿಹಾರದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.
"ಇದಕ್ಕಿಂತ ದುರದೃಷ್ಟಕರ ಮತ್ತೊಂದಿಲ್ಲ. ರಾಜ್ಯಸಭೆಯಲ್ಲೂ ಕಾಂಗ್ರೆಸ್ ಇದೆ, ಅವರ ಹಿರಿಯ ನಾಯಕರು ಬಹಳ ಉತ್ಸಾಹದಿಂದ ಚರ್ಚಿಸುತ್ತಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಮತ್ತೊಂದೆಡೆ, ಕಾಂಗ್ರೆಸ್ ನ ಇನ್ನೊಂದು ವಿಭಾಗವಿದೆ( ಲೋಕಸಭೆಯಲ್ಲಿ). ಆ ಬಗ್ಗೆ ಸಮಯವೇ ಹೇಳುತ್ತದೆ" ಎಂದು ಟಾಂಗ್ ನೀಡಿದರು.