ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಾಂಬ್ ದಾಳಿ ನಡೆದಿದ್ದು, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಮೂವರು ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ಸಂಭವಿಸಿದೆ. ಬಾಂಬ್ ದಾಳಿಯಲ್ಲಿ ಮೃತಪಟ್ಟವರನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಸೌವಿಕ್ ದೊಲೈ ಎಂದು ಗುರುತಿಸಲಾಗಿದೆ. ಗಾಯಗೊಂಡ ಮೂವರನ್ನು ಮಿಡ್ನಾಪುರದ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿದೆ.
ನಾಲ್ವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮಕ್ರಾಂಪುರದಲ್ಲಿ ರಾತ್ರಿ ರಸ್ತೆ ಬದಿ ಮಾತನಾಡುತ್ತಾ ನಿಂತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಬಾಂಬ್ ಎಸೆದಿದ್ದಾರೆ. ಅಲ್ಲಿಂದ ಓಡಲು ನೋಡಿದ ದೊಲೈ ಮೇಲೆ ಗುಂಡು ಹಾರಿಸಿದ್ದಾರೆ. ದೊಲೈ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಘಟನೆಗೆ ಬಿಜೆಪಿಯವರೇ ಕಾರಣ ಎಂದು ಸ್ಥಳೀಯ ಟಿಎಂಸಿ ನಾಯಕರು ಆಕ್ಷೇಪಿಸಿದ್ದು, ತೃಣಮೂಲ ಕಾಂಗ್ರೆಸ್ ಒಳಜಗಳದಿಂದ ಈ ಘಟನೆ ನಡೆದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಮಿತ್ ದಾಸ್ ಆರೋಪಿಸಿದ್ದಾರೆ.
ನಾವು ಹಿಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಉತ್ತಮ ಮತಗಳನ್ನು ಪಡೆದಿದ್ದೆವು. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ನಮ್ಮನ್ನು ಗೆಲುವಿನಿಂದ ತಡೆಯಲು ಈ ರೀತಿ ಮಾಡಲಾಗಿದೆ. ಇದು ಬಿಜೆಪಿಯದ್ದೇ ಕೆಲಸ ಎಂದು ಟಿಎಂಸಿ ಜಿಲ್ಲಾ ಅಧ್ಯಕ್ಷ ಅಜಿತ್ ಮೈಟಿ ಆರೋಪಿಸಿದ್ದಾರೆ.
ಇದೇ ಏಪ್ರಿಲ್- ಮೇ ತಿಂಗಳಿನಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ತೃಣಮೂಲ ಹಾಗೂ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.