ಹೈದರಾಬಾದ್ : ಕೋಳಿಗಳನ್ನು ಮುಂದಿಟ್ಟುಕೊಂಡು ಜೂಜಾಡಿದರೆ ಯಾರನ್ನು ಬಂಧಿಸಬೇಕು? ಜೂಜು ಆಡಿದವರನ್ನು. ಆದರೆ ತೆಲಂಗಾಣದ ಪೊಲೀಸರು ಜೂಜಾಡಿದವರೊಂದಿಗೆ ಜೂಜಿಗೆ ಬಿಟ್ಟಿದ್ದ ಕೋಳಿಗಳನ್ನೂ ಜೈಲಿಗೆ ಹಾಕಿದ್ದಾರೆ.
ಇಂಥದ್ದೊಂದು ವಿಚಿತ್ರ ಸಂಗತಿ ತೆಲಂಗಾಣದ ಖಮ್ಮಂ ಜಿಲ್ಲೆಯ ಮಿಡಿಗೊಂಡ ಪೊಲೀಸ್ ಠಾಣೆಯಲ್ಲಿ ಬೆಳಕಿಗೆ ಬಂದಿದೆ.
ಸಂಕ್ರಾಂತಿ ಸಮಯದಲ್ಲಿ ತೆಲಂಗಾಣದಲ್ಲಿ ಕೋಳಿಜೂಜು ನಡೆಯುವುದು ಹೆಚ್ಚು. ಹೀಗಾಗಿ ಈ ಸಮಯದಲ್ಲಿ ಕೋಳಿಅಂಕ ವಿರೋಧಿ ಕಾರ್ಯಾಚರಣೆ ಆರಂಭಿಸಿದ್ದರು ಪೊಲೀಸರು. ಈ ಸಂದರ್ಭ ಜನವರಿ 10ರಂದು ಈ ಎರಡು ಹುಂಜಗಳನ್ನೂ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಇಲ್ಲಿನ ಬಾನಾಪುರಂ ಹಳ್ಳಿಯಲ್ಲಿ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಜೂಜಿನಲ್ಲಿ ತೊಡಗಿಕೊಂಡಿದ್ದ ಹತ್ತು ಜನರನ್ನು ಹಾಗೂ ಕೋಳಿ ಜೂಜು ಆಯೋಜಿಸಿದ್ದ ಇಬ್ಬರನ್ನು ಬಂಧಿಸಿದ್ದರು. ಜೂಜು ಅಡ್ಡೆಯಿಂದ ಬೈಕ್ ಹಾಗೂ ಎರಡು ಹುಂಜಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜೂಜಿನಲ್ಲಿ ಜೈಲು ಸೇರಿದ್ದವರಿಗೆಲ್ಲಾ ಜಾಮೀನು ದೊರೆತು ಹೊರಗೆ ಬಂದರೂ ಈ ಎರಡು ಹುಂಜಗಳು ಮಾತ್ರ ಕಂಬಿ ಹಿಂದೆಯೇ ಉಳಿದಿವೆ. ಅವುಗಳನ್ನು ತೆಗೆದುಕೊಳ್ಳಲೂ ಯಾರೂ ಮುಂದೆ ಬಂದಿಲ್ಲ.
ಈ ಹುಂಜಗಳನ್ನು ಜೂಜು ಪ್ರಕರಣದ ಸಾಕ್ಷ್ಯವಾಗಿ ಇಟ್ಟುಕೊಂಡಿದ್ದೇವೆ. ಅವುಗಳನ್ನು ನ್ಯಾಯಾಲಯದಲ್ಲಿ ಸಾಕ್ಷ್ಯದಂತೆ ಸಲ್ಲಿಸುತ್ತೇವೆ ಎಂದು ಹೇಳಿರುವ ಪೊಲೀಸರು, ನಂತರ ಅವುಗಳನ್ನು ಹರಾಜಿಗಿಡುವುದಾಗಿ ತಿಳಿಸಿದ್ದಾರೆ. ಆದರೆ ಜೈಲು ಕಂಬಿ ಹಿಂದಿರುವ ಹುಂಜಗಳ ಸಂಗತಿ ಮಾತ್ರ ಜನರಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.