ನವದೆಹಲಿ: ಬ್ರೆಜಿಲ್, ರಷ್ಯಾ, ಭಾರತ , ಚೀನಾ, ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನೊಳಗೊಂಡ ಬ್ರಿಕ್ಸ್ ಶೃಂಗಸಭೆಯ ಈ ಬಾರಿಯ ಅಧ್ಯಕ್ಷತೆಯನ್ನು ಭಾರತವೇ ವಹಿಸಲಿದೆ.
ಈ ಬಾರಿ ಭಾರತ ಬ್ರಿಕ್ಸ್ ಶೃಂಗಸಭೆ ಆಯೋಜಿಸುವುದಕ್ಕೆ ಚೀನಾ ಸೋಮವಾರ ಬೆಂಬಲ ವ್ಯಕ್ತಪಡಿಸಿದೆ. ಐದು ಸದಸ್ಯ ರಾಷ್ಟ್ರಗಳು ಆರ್ಥಿಕ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ಭಾರತದೊಂದಿಗೆ ಪ್ರಬಲ ಸಹಕಾರದೊಂದಿಗೆ ಕಾರ್ಯನಿರ್ವಹಿಸುವುದಾಗಿ ಚೀನಾ ಹೇಳಿದೆ.
ಆದಾಗ್ಯೂ, ಚೀನಾ ಅಧ್ಯಕ್ಷ ಕ್ಸಿ-ಜಿನ್ ಪಿಂಗ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಯೇ ಎಂಬುದನ್ನು ವಾಂಗ್ ಸ್ಪಷ್ಪಪಡಿಸಲಿಲ್ಲ. ಈ ಹಿಂದಿನ ಎಲ್ಲಾ ಶೃಂಗಸಭೆಯಲ್ಲಿ ಕ್ಸಿ-ಜಿನ್ ಪಿಂಗ್ ಪಾಲ್ಗೊಂಡಿದ್ದರು.
ಫೆ.19 ರಂದು ನವದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಬ್ರಿಕ್ಸ್ ಸಚಿವಾಲಯ ಬ್ರಿಕ್ಸ್ 2021 ವೆಬ್ ಸೈಟ್ ಅನಾವರಣಗೊಳಿಸಿದ್ದರು.
ಭಾರತ ಈ ಬಾರಿ ಅಧ್ಯಕ್ಷತೆ ವಹಿಸುತ್ತಿರುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಚೀನಾ ವಿದೇಶಾಂಗ ವ್ಯವಹಾರಗಳ ವಕ್ತಾರ ವಾಂಗ್ ವೆನ್ ಬಿನ್ , ಭಾರತ ಶೃಂಗಸಭೆ ಆಯೋಜಿಸುವುದನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಅತ್ಯುನ್ನತ ಸೌಹಾರ್ದಯತೆ ಮತ್ತು ಆಳವಾದ ಪ್ರಾಯೋಗಿಕ ಸಹಕಾರ, ಪ್ರಭಾವ ಇರುವುದನ್ನು ನೋಡಬಹುದಾಗಿದೆ. ಅದರೊಂದಿಗೆ ಬಲವಾದ ಕಾರ್ಯತಂತ್ರ ಪಾಲುದಾರಿಕೆ, ಸೌಹಾರ್ದತೆ ಹಾಗೂ ಸಹಕಾರಕ್ಕೆ ನಾವು ಬದ್ಧವಾಗಿರುವುದಾಗಿ ಅವರು ಹೇಳಿದ್ದಾರೆ.