ಶ್ರೀಹರಿಕೋಟಾ: ಈ ತಿಂಗಳ ಅಂತ್ಯದಲ್ಲಿ ಉಡಾವಣೆಯಾಗುವ ಸತೀಶ್ ಧವನ್ ಉಪಗ್ರಹದಲ್ಲಿ ಭಗವದ್ಗೀತೆಯ ಒಂದು ಪ್ರತಿ, ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಮತ್ತು 25,000 ಜನರ ಹೆಸರು ಬಾಹ್ಯಾಕಾಶಕ್ಕೆ ರವಾನೆಯಾಗಲಿವೆ.
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮೂಲಕ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸತೀಶ್ ಧವನ್ ಉಪಗ್ರಹ (ಎಸ್‌ಡಿ ಸ್ಯಾಟ್) ಉಡಾವಣೆಯಾಗಲಿದೆ. ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಇರುವ ಸ್ಪೇಸ್‌ಕಿಡ್ಸ್ ಇಂಡಿಯಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ನ್ಯಾನೋ ಉಪಗ್ರಹಕ್ಕೆ ಭಾರತದ ಬಾಹ್ಯಾಕಾಶ ಯೋಜನೆಯ ಪಿತಾಮಹರಲ್ಲಿ ಒಬ್ಬರಾದ ಸತೀಶ್ ಧವನ್ ಅವರ ಹೆಸರು ಇರಿಸಲಾಗಿದೆ.
ಬಾಹ್ಯಾಕಾಶ ವಿಕಿರಣದ ಅಧ್ಯಯನ, ಕಾಂತವಲಯದ ಅಧ್ಯಯನ ಮತ್ತು ಕೆಳ ಮಟ್ಟದ ಪ್ರದೇಶ ಸಂವಹನ ಶಕ್ತಿ ಜಾಲದ ಬಗ್ಗೆ ಅಧ್ಯಯನ ಮಾಡುವ ಮೂರು ವೈಜ್ಞಾನಿಕ ಪೇಲೋಡ್‌ಗಳನ್ನು ಉಪಗ್ರಹದಲ್ಲಿ ರವಾನಿಸಲಾಗುತ್ತಿದೆ.
ಸಮೂಹದಲ್ಲಿ ಸಾಕಷ್ಟು ಕಾತರ ಮೂಡಿದೆ. ಬಾಹ್ಯಾಕಾಶಕ್ಕೆ ನಿಯೋಜನೆಯಾಗುತ್ತಿರುವ ನಮ್ಮ ಮೊದಲ ಉಪಗ್ರಹ ಇದು. ಯೋಜನೆ ಅಂತಿಮಗೊಂಡ ಬಳಿಕ ನಾವು ಬಾಹ್ಯಾಕಾಶಕ್ಕೆ ರವಾನಿಸಲು ಹೆಸರು ನೀಡುವಂತೆ ಜನರನ್ನು ಕೇಳಿದ್ದೆವು. ಒಂದು ವಾರದೊಳಗೆ ನಮಗೆ 25,000 ಹೆಸರುಗಳು ಬಂದಿದ್ದವು. ಇದರಲ್ಲಿ 1,000 ಹೆಸರು ಬೇರೆ ದೇಶಗಳಿಂದ ಬಂದಿವೆ. ಚೆನ್ನೈನ ಶಾಲೆಯೊಂದು ಅಲ್ಲಿನ ಪ್ರತಿಯೊಬ್ಬರ ಹೆಸರನ್ನೂ ಕಳುಹಿಸಿದೆ. ಜನರಲ್ಲಿ ಯೋಜನೆ ಮತ್ತು ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಈ ನಿರ್ಧಾರ ತೆಗೆದುಕೊಂಡಿದ್ದೆವು' ಎಂದು ಸ್ಪೇಸ್‌ಕಿಡ್ಜ್ ಇಂಡಿಯಾದ ಸಂಸ್ಥಾಪಕಿ ಡಾ. ಶ್ರೀಮತಿ ಕೆಸಾನ್ ತಿಳಿಸಿದ್ದಾರೆ.
'ಇದರ ಜತೆಗೆ ನಾವು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು, ಅವರ ಛಾಯಾಚಿತ್ರ ಹಾಗೂ ಆತ್ಮನಿರ್ಭರ ಯೋಜನೆ ಕುರಿತಾದ ಅವರ ಮಾತುಗಳನ್ನು ಪ್ರಮುಖವಾಗಿ ಅಳವಡಿಸಿದ್ದೇವೆ. ಈ ಉಪಗ್ರಹವು ಸಣ್ಣ ವಿದ್ಯುತ್ ಉಪಕರಣ ಸೇರಿದಂತೆ ಪ್ರತಿಯೊಂದೂ ಭಾರತದಲ್ಲಿನ ಸಾಧನಗಳಿಂದಲೇ ಸಿದ್ಧವಾಗಿದೆ. ಇತರೆ ಅನೇಕ ಬಾಹ್ಯಾಕಾಶ ಯೋಜನೆಗಳು ಬೈಬಲ್‌ನಂತಹ ಪವಿತ್ರ ಗ್ರಂಥಗಳನ್ನು ಕೊಂಡೊಯ್ದಿವೆ. ಹೀಗಾಗಿ ನಾವು ಭಗವದ್ಗೀತೆಯ ಪ್ರತಿಯೊಂದನ್ನು ಕಳುಹಿಸಲು ನಿರ್ಧರಿಸಿದ್ದೆವು' ಎಂದು ಹೇಳಿದ್ದಾರೆ.