ಘಾಜಿಯಾಬಾದ್: ದೇಶದಲ್ಲಿ ಹಸಿವಿನ ಮೇಲೆ ವ್ಯಾಪಾರ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದಿರುವ ರೈತ ಮುಖಂಡ ರಾಕೇಶ್ ಟಿಕೈತ್ ಅವರು, ಹೊಸ ವಿವಾದಾತ್ಮಕ ಕೃಷಿ-ಮಾರುಕಟ್ಟೆ ಕಾನೂನುಗಳನ್ನು ರದ್ದುಗೊಳಿಸುವುದರ ಜೊತೆಗೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ(ಎಂಎಸ್‍ಪಿ) ಬಗ್ಗೆ ಕಾನೂನು ಜಾರಿಗೆ ತರಬೇಕು ಎಂದು ಸೋಮವಾರ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ನೂತನ ಕೃಷಿ ಕಾಯ್ದೆಗಳನ್ನು ಮರ್ಥಿಸಿಕೊಂಡ ಬೆನ್ನಲ್ಲೇ ಭಾರತೀಯ ಕಿಸಾನ್ ಯೂನಿಯನ್ ವಕ್ತಾರರು ಈ ಹೇಳಿಕೆ ನೀಡಿದ್ದು, ದೇಶದಲ್ಲಿ ಹಸಿವಿನ ಮೇಲೆ ಯಾರೂ ವ್ಯಾಪಾರ ಮಾಡುವುದಿಲ್ಲ. ಹಸಿವು ಹೆಚ್ಚಾದರೆ, ಬೆಳೆಗಳ ಬೆಲೆಯನ್ನು ಅದಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಹಸಿವಿನ ಮೇಲೆ ವ್ಯಾಪಾರ ಬಯಸುವವರನ್ನು ದೇಶದಿಂದ ಹೊರಹಾಕಲಾಗುತ್ತದೆ ಎಂದರು.
"ವಿಮಾನ ಟಿಕೆಟ್‍ನ ದರಗಳು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಏರಿಳಿತಗೊಳ್ಳುತ್ತವೆ, ಬೆಳೆಗಳ ಬೆಲೆಯನ್ನು ಅದೇ ರೀತಿ ನಿರ್ಧರಿಸಲಾಗುವುದಿಲ್ಲ" ಎಂದು ಟಿಕೈತ್ ಹೇಳಿದ್ದಾರೆ.
ಹೊಸ ಸಮುದಾಯವೊಂದು "ಪ್ರತಿಭಟನೆಯಲ್ಲಿ ನಿರತವಾಗಿದೆ ಎಂಬ ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಟಿಕೈತ್, "ಹೌದು, ಈ ಬಾರಿ ರೈತರ ಸಮುದಾಯವೇ ಹೊಸ ಸಮುದಾಯವಾಗಿ ಹೊರಹೊಮ್ಮಿದೆ ಮತ್ತು ಜನರು ಸಹ ರೈತರಿಗೆ ಬೆಂಬಲ ನೀಡುತ್ತಿದ್ದಾರೆ" ಎಂದರು.
ಇದೇ ವೇಳೆ ರೈತರ ಪ್ರತಿಭಟನೆಯನ್ನು ಜಾತಿ ಮತ್ತು ಧಾರ್ಮದ ಆಧಾರ ಮೇಲೆ ಒಡೆಯಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಟಿಕೈತ್, ದೇಶದ ರೈತರು ಒಂದಾಗಿದ್ದಾರೆ. ಇಲ್ಲಿ ಸಣ್ಣ ರೈತ ಅಥವಾ ದೊಡ್ಡ ರೈತ ಇಲ್ಲ. ಚಳುವಳಿ ಎಲ್ಲಾ ರೈತರಿಗೆ ಸೇರಿದೆ ಎಂದರು.