ತಿರುವನಂತಪುರ: ಹಿಂಬಾಗಿಲಿನ ನೇಮಕಾತಿ ಸಂಬಂಧಿಸಿ ಪಿ.ಎಸ್.ಸಿ ಅಭ್ಯರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುವ ಸೂಚನೆ ಲಭ್ಯವಾಗಿದೆ. ತಮ್ಮ ಬೇಡಿಕೆಗಳನ್ನು ಅಂಗೀಕರಿಸಿ ಅನುಕೂಲಕರ ಆದೇಶ ಹೊರಡಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅಭ್ಯರ್ಥಿಗಳು ಎಚ್ಚರಿಸುತ್ತಿದ್ದಾರೆ. ಅಭ್ಯರ್ಥಿಗಳು ಸರ್ಕಾರದಿಂದ ಸಕಾರಾತ್ಮಕ ಕ್ರಮ ಕೈಗೊಳ್ಳುವ ನಿರೀಕ್ಷೆಯಲ್ಲಿದ್ದು, ಈ ಮಧ್ಯೆ ಸಿಪಿಎಂ ಕಾರ್ಯದರ್ಶಿ ವಿಜಯ ರಾಘವನ್ ಅವರ ಹೇಳಿಕೆ ಅಭ್ಯರ್ಥಿಗಳನ್ನು ಕೆರಳಿಸಿದೆ.
ಶನಿವಾರ ಸೆಕ್ರಟರಿಯೇಟ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪಿ.ಎಸ್.ಸಿ ಅಭ್ಯರ್ಥಿಗಳೊಂದಿಗೆ ಸರ್ಕಾರ ಚರ್ಚೆ ನಡೆಸಿತ್ತು. ಆದರೆ ಸಮಸ್ಯೆಗೆ ಪರಿಹಾರ ಒದಗಿಸುವ ದೃಢ ನಿರ್ಧಾರಗಳನ್ನು ಕೈಗೊಳ್ಳದ ಕಾರಣ ಅಭ್ಯರ್ಥಿಗಳು ಮುಷ್ಕರಕ್ಕೆ ಮುಂದಾಗಲು ನಿರ್ಧರಿಸಿದರು. ಚರ್ಚೆಯ ಸಂದರ್ಭದಲ್ಲಿ ಬೇಡಿಕೆಯ ಬಗ್ಗೆ ಸ್ಪಷ್ಟ ಸಂದೇಶ ನೀಡಲಾಗಿದೆ ಎಂದು ಅಭ್ಯರ್ಥಿಗಳು ಪ್ರತಿಕ್ರಿಯಿಸಿದರು.
ಬೇಡಿಕೆಗಳನ್ನು ಪರಿಗಣಿಸಬೇಕು ಮತ್ತು ಪ್ರಸ್ತುತ ಮುಷ್ಕರವನ್ನು ನಿಲ್ಲಿಸಬೇಕು ಎಂದು ಸರ್ಕಾರ ಸೂಚಿಸಿತ್ತು. ಆದರೆ ಅಭ್ಯರ್ಥಿಗಳು ಮುಷ್ಕರವನ್ನು ಕೇವಲ ಪದಗಳಿಂದ ನಿಲ್ಲಿಸಲು ಸಾಧ್ಯವಿಲ್ಲ ಮತ್ತು ಸರ್ಕಾರದಿಂದ ಅಧಿಕೃತ ಆದೇಶಕ್ಕಾಗಿ ಕಾಯಲಾಗುವುದೆಂದು ಸ್ಪಷ್ಟಪಡಿಸಿರುವರು. ಭಾನುವಾರ ಸಂಜೆಯೊಳಗೆ ಆದೇಶ ಬರದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪ್ರತಿಭಟನಾಕಾರರ ವಕ್ತಾರ ರಿಜು ಹೇಳಿದ್ದು, ನಿನ್ನೆ ಸಂಜೆ ಸರ್ಕಾರದಿಂದ ಯಾವುದೇ ನಿಗದಿತ ಆದೇಶ ಬಂದಿಲ್ಲ ಎನ್ನಲಾಗಿದೆ.
ಅಭ್ಯರ್ಥಿಗಳು ಗೃಹ ಕಾರ್ಯದರ್ಶಿ ಮತ್ತು ಎಡಿಜಿಪಿ ಮನೋಜ್ ಅಬ್ರಹಾಂ ಅವರೊಂದಿಗೆ ಶನಿವಾರ ಚರ್ಚೆ ನಡೆಸಿದ್ದರು. ಪ್ರತಿ ಮೂರು ಎಲ್ಜಿಎಸ್ ಮತ್ತು ಸಿಪಿಒ ಶ್ರೇಣಿಯ ಪಟ್ಟಿಗಳ ನೇಮಕಾತಿ ಸಂಬಂಧ ವಿಸ್ಕøತ ಚರ್ಚೆ ನಡೆದಿತ್ತು.