ನವದೆಹಲಿ: ಒಟಿಟಿಗಳ (ಓವರ್ ದ ಟಾಪ್) ನಿಯಂತ್ರಣಕ್ಕೆ ಸರ್ಕಾರ ಸದ್ಯದಲ್ಲಿಯೇ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವದೇಕರ್ ತಿಳಿಸಿದ್ದಾರೆ.
ಅವರು ರಾಜ್ಯಸಭೆಯ ಶೂನ್ಯ ಅವಧಿಯಲ್ಲಿ ಮಾಹಿತಿ ನೀಡಿ, ಒಟಿಟಿಗಳ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ದೂರುಗಳು ಮತ್ತು ಸಲಹೆಗಳು ಸಾಕಷ್ಟು ಬರುತ್ತಿದ್ದವು. ಸೂಕ್ಷ್ಮ ವಿಷಯಗಳನ್ನು ನಿಭಾಯಿಸಲು ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸುತ್ತಿದ್ದು, ಮಾರ್ಗಸೂಚಿ ಮತ್ತು ಆದೇಶಗಳು ಸುಮಾರಾಗಿ ಸಿದ್ದವಾಗಿವೆ. ಸದ್ಯದಲ್ಲಿಯೇ ಜಾರಿಗೆ ಬರಲಿದೆ ಎಂದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾವಿಸಿದ ಬಿಜೆಪಿಯ ಮಹೇಶ್ ಪೊದ್ದರ್, ಒಟಿಟಿಯಲ್ಲಿ ಬಳಸುವ ವಿಷಯ ಮತ್ತು ಭಾಷೆಗಳು ಆಕ್ಷೇಪಾರ್ಹವಾಗಿದೆ. ಲೈಂಗಿಕ ದೌರ್ಜನ್ಯ, ಅಶ್ಲೀಲ ಪದಬಳಕೆಯನ್ನು ಒಟಿಟಿಯಡಿ ಬಳಸಲಾಗುತ್ತಿದ್ದು, ಸರ್ಕಾರ ತಡಮಾಡದೆ ತಕ್ಷಣವೇ ಇಂಟರ್ನೆಟ್ ನಿಯಂತ್ರಣಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ 40ರಷ್ಟು ಒಟಿಟಿ ಪ್ಲಾಟ್ ಫಾರ್ಮ್ ಗಳಿದ್ದು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಹಾಟ್ ಸ್ಟಾರ್(ಡಿಸ್ನಿ ಪ್ಲಸ್) ಮತ್ತು ನೂರಾರು ನ್ಯೂಸ್ ಕಂಟೆಂಡ್ ವೆಬ್ ಸೈಟ್ ಗಳಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಮಾಹಿತಿ ಖಾತೆ ಸಚಿವ ಪ್ರಕಾಶ್ ಜಾವದೇಕರ್, ಇದೊಂದು ಬಹಳ ಮುಖ್ಯವಾದ ವಿಷಯ. ಈ ಬಗ್ಗೆ ಸಾಕಷ್ಟು ದೂರುಗಳು, ಸಲಹೆಗಳು ಬರುತ್ತಿವೆ. ಈ ಬಗ್ಗೆ ಮಾರ್ಗಸೂಚಿಗಳು ಮತ್ತು ಆದೇಶಗಳು ಸಿದ್ದವಾಗಿದ್ದು ಸದ್ಯದಲ್ಲಿಯೇ ಜಾರಿಗೆ ಬರಲಿದೆ ಎಂದರು.
ಭಾರತ ಸರ್ಕಾರದಲ್ಲಿ ಜಂಟಿ ಕಾರ್ಯದರ್ಶಿ ಹುದ್ದೆಗೆ ನೇರ ನೇಮಕಾತಿ ಮಾಡಬೇಕೆಂದು ಸೂಚಿಸಿದ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಈಗಿರುವ ನೇಮಕಾತಿ ವ್ಯವಸ್ಥೆಯಿಂದ ಐಎಎಸ್, ಐಆರ್ ಎಸ್ ಅಧಿಕಾರಿಗಳು ಬೇಸತ್ತಿದ್ದಾರೆ ಎಂದರು. ಅಲ್ಲದೆ ಈ ನೇಮಕಾತಿಗಳಡಿಯಲ್ಲಿ ಎಸ್. ಸಿ, ಎಸ್ .ಟಿ, ಒಬಿಸಿಗಳಿಗೆ ಯಾವುದೇ ಮೀಸಲಾತಿಯಿಲ್ಲ. ಇಂತಹ ನೇಮಕಾತಿಯನ್ನು ನಿಲ್ಲಿಸುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಸೂಚಿಸಬೇಕೆಂದು ಒತ್ತಾಯಿಸಿದರು.
ಇಪಿಎಫ್ -95 ಯೋಜನೆಯಡಿ ಬರುವ ಪಿಂಚಣಿದಾರರಿಗೆ ಮಾಸಿಕ ಪಿಂಚಣಿಯನ್ನು ಪ್ರಸ್ತುತ ರೂ 300 ರಿಂದ 3,000 ರೂ.ಗೆ 9,000 ರೂ.ಗೆ ಏರಿಸಬೇಕೆಂದು ಕಾಂಗ್ರೆಸ್ ನ ನೀರಜ್ ಡಂಗಿ ಒತ್ತಾಯಿಸಿದರು.