HEALTH TIPS

ಔಷಧ, ಐಟಿ ಕ್ಷೇತ್ರಗಳಿಗೆ ಪ್ರೋತ್ಸಾಹ ಯೋಜನೆ

           ನವದೆಹಲಿ: ದೇಶದ ಔಷಧ ತಯಾರಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಹಾರ್ಡ್‌ವೇರ್‌ ತಯಾರಿಕಾ ಕ್ಷೇತ್ರಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಬುಧವಾರ  22,350 ಕೋಟಿ ಮೌಲ್ಯದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆಯನ್ನು ಘೋಷಿಸಿದೆ.

           ಈ ಕ್ಷೇತ್ರಗಳಲ್ಲಿ ಹೂಡಿಕೆ ಆಕರ್ಷಿಸುವುದು ಮತ್ತು ಉದ್ಯೋಗಾವಕಾಶ ಹೆಚ್ಚಿಸುವ ಗುರಿ ಹೊಂದಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರೋತ್ಸಾಹ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

'ಔಷಧ ತಯಾರಿಕಾ ಕ್ಷೇತ್ರಕ್ಕೆ 15,000 ಕೋಟಿಯ ಪ್ರೋತ್ಸಾಹ ಯೋಜನೆ ಘೋಷಿಸಲಾಗಿದ್ದು, 2020-21ರಿಂದ 2028-29ರ ಅವಧಿಯಲ್ಲಿ ಇದು ಜಾರಿಯಾಗಲಿದೆ. ದೇಶೀಯ ಔಷಧ ತಯಾರಕರಿಗೆ ಈ ಯೋಜನೆಯಿಂದ ಪ್ರೋತ್ಸಾಹ ಲಭಿಸುವುದಲ್ಲದೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಔಷಧಗಳನ್ನು ಪೂರೈಸಲು ಸಹಾಯವಾಗಲಿದೆ. ರಫ್ತು ವಿಚಾರದಲ್ಲೂ ಈ ಯೋಜನೆಯು ಸಹಾಯಕವಾಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

'2022ರಿಂದ 2028ರವರೆಗಿನ ಆರು ವರ್ಷಗಳಲ್ಲಿ ಮಾರಾಟದಲ್ಲಿ 2.94 ಲಕ್ಷ ಕೋಟಿ ಹಾಗೂ ರಫ್ತಿನಲ್ಲಿ 1.96 ಲಕ್ಷ ಕೋಟಿಯಷ್ಟು ಏರಿಕೆಯನ್ನು ನಿರೀಕ್ಷಿಸಲಾಗಿದೆ. ದೇಶದ ಔಷಧ ಕ್ಷೇತ್ರದಲ್ಲಿ ಸುಮಾರು 15,000 ಕೋಟಿ ವಿದೇಶಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಈ ಯೋಜನೆಯು 20,000 ನೇರ ಹಾಗೂ ಸುಮಾರು 80,000ದಷ್ಟು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದೂ ಅವರು ತಿಳಿಸಿದರು.

        'ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಇನ್ನಷ್ಟು ಅಭಿವೃದ್ಧಿ ಸಾಧಿಸುವ ಶಕ್ತಿ ಭಾರತದ ಔಷಧ ಕ್ಷೇತ್ರಕ್ಕೆ ಇದೆ. ಹೂಡಿಕೆಯನ್ನು ಆಕರ್ಷಿಸಿ ತಯಾರಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು, ಆ ಮೂಲಕ ದೇಶದ ಔಷಧ ತಯಾರಿಕಾ ಕ್ಷೇತ್ರವನ್ನು ಜಾಗತಿಕ ನಾಯಕನನ್ನಾಗಿಸುವುದು ಈ ಯೋಜನೆಯ ಉದ್ದೇಶ' ಎಂದು ಅವರು ಹೇಳಿದರು.

         ಕಂಪ್ಯೂಟರ್‌ ತಯಾರಿಕೆಗೆ ಪ್ರೋತ್ಸಾಹ: ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಆಲ್ ‌ಇನ್‌ ವನ್‌ ಕಂಪ್ಯೂಟರ್‌ ಹಾಗೂ ಸರ್ವರ್‌ಗಳಂಥ ಹಾರ್ಡ್‌ವೇರ್‌ ತಯಾರಿಕೆಗೆ ಪ್ರೋತ್ಸಾಹ ನೀಡಲು  7,350 ಕೋಟಿಯ ತಯಾರಿಕೆ ಆಧರಿತ ಪ್ರೋತ್ಸಾಹ ಯೋಜನೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.

'ಸ್ಥಳೀಯ ಮತ್ತು ಜಾಗತಿಕ ಮಟ್ಟದ ಕಂಪನಿಗಳು ಈ ಯೋಜನೆಯ ಲಾಭ ಪಡೆಯಲಿವೆ. ಹೊಸ ಯೋಜನೆಯಡಿ ಮುಂದಿನ ನಾಲ್ಕು ವರ್ಷಗಳಲ್ಲಿ  3.26 ಕೋಟಿ ಮೌಲ್ಯದ ತಯಾರಿಕೆ ಹಾಗೂ  2.45 ಕೋಟಿ ಮೌಲ್ಯದ ರಫ್ತನ್ನು ನಿರೀಕ್ಷಿಸಲಾಗಿದೆ. 1.80 ಲಕ್ಷ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

           'ಭಾರತವು 29,470 ಕೋಟಿ ಮೌಲ್ಯದ ಲ್ಯಾಪ್‌ಟಾಪ್‌ ಹಾಗೂ 2870 ಕೋಟಿ ಮೌಲ್ಯದ ಟ್ಯಾಬ್ಲೆಟ್‌ಗಳನ್ನು ಈಗ ಆಮದು ಮಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ನಾಲ್ಕೈದು ಕಂಪನಿಗಳೇ ಶೇ 70ರಷ್ಟು ಮಾರುಕಟ್ಟೆ ಪಾಲನ್ನು ತಮ್ಮದಾಗಿಸಿಕೊಂಡಿವೆ. ಈ ಕಂಪನಿಗಳು ಹಾಗೂ ದೇಶೀಯ ಕಂಪನಿಗಳು ಸಹ ಪ್ರೋತ್ಸಾಹ ಯೋಜನೆಯ ಲಾಭ ಪಡೆದುಕೊಳ್ಳಬಹುದು' ಎಂದು ರವಿಶಂಕರ್‌ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries