ಕಾಸರಗೋಡು:ಬಿಜೆಪಿ ರಾಜ್ಯ ಸಮಿತಿ ವತಿಯಿಂದ ಫೆ. 21ರಂದು ನಡೆಯಲಿರುವ ವಿಜಯ ಯಾತ್ರೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಾಗತಕ್ಕೆ ಕಾಸರಗೋಡು ನಗರ ಸಜ್ಜುಗೊಂಡಿದೆ. ಮಧ್ಯಾಹ್ನ 3ಕ್ಕೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಯಾತ್ರೆಗೆ ಚಾಲನೆ ನೀಡುವರು. ಸಮಾರಂಭದಲ್ಲಿ ಕೇರಳ ಮತ್ತು ಕರ್ನಾಟಕದ ಬಿಜೆಪಿಯ ಹಿರಿಯ ಮುಖಂಡರು ಪಾಲ್ಗೊಳ್ಳುವರು.
ಯೋಗಿ ಆದಿತ್ಯನಾಥ್ ಕಾಸರಗೋಡು ಭೇಟಿ ಹಿನ್ನೆಲೆಯಲ್ಲಿ ಕಾಸರಗೋಡು ನಗರಾದ್ಯಂತ ಟ್ರಾಫಿಕ್ ನಿಯಂತ್ರಣ ಏರ್ಪಡಿಸಲಾಗಿದೆ. ಮಂಗಳೂರು ಭಾಗದಿಂದ ಕಾಸರಗೋಡು ಹಾದಿಯಾಗಿ ಕಣ್ಣೂರು ಸಂಚರಿಸುವ ವಾಹನಗಳನ್ನು ಕುಂಬಳೆ-ಸೀತಾಂಗೋಳಿ-ಉಳಿಯತ್ತಡ್ಕ-ಉದಯಗಿರಿ ಹಾದಿಯಾಗಿ
ವಿದ್ಯಾನಗರ ಮೂಲಕ ಹೆದ್ದಾರಿಗೆ ತೆರಳುವಂತೆ ಸೂಚಿಸಲಾಗಿದೆ. ಕಣ್ಣೂರಿನಿಂದ ಕುಂಬಳೆ-ಮಂಗಳೂರು ಭಾಗಕ್ಕೆ ಸಂಚರಿಸುವ ವಾಹನಗಳು ವಿದ್ಯಾನಗರ-ಉಳಿಯತ್ತಡ್ಕ-ಸೀತಾಂಗೋಳಿ ಮೂಲಕ ಕುಂಬಳೆ ಹಾದಿ ಮೂಲಕ ಸಂಚರಿಸಬೇಕು. ಟ್ಯಾಂಕರ್ ಲಾರಿಗಳನ್ನು ಸಮಾರಂಭ ಮುಗಿಯುವಲ್ಲಿ ವರೆಗೆ ಕುಂಬಳೆ, ಮೊಗ್ರಾಲ್ ರಸ್ತೆಬದಿ ನಿಲುಗಡೆಗೊಳಿಸುವಂತೆ ಸೂಚಿಸಲಾಗಿದೆ. ಕಾರ್ಯಕ್ರಮ ನಡೆಯುವ ತಾಳಿಪಡ್ಪು ಮೈದಾನದಲ್ಲಿ ಉತ್ತರಪ್ರದೇಶ ಪೊಲೀಸರ ಮೇಲ್ನೋಟದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.