ನವದೆಹಲಿ: ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಶ್ವಾಸ ಕಳೆದುಕೊಂಡು ಪತನವಾದ ನಂತರ ನೂತನ ಸರ್ಕಾರ ರಚನೆಗೆ ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಮುಂದಾಗದ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಗಿದೆ.
ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವ ಪ್ರಸ್ತಾಪಕ್ಕೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಅವರು ರಾಜೀನಾಮೆ ನೀಡಿದ ನಂತರ ಯಾವುದೇ ಪಕ್ಷ ಪುದುಚೇರಿಯಲ್ಲಿ ಸರ್ಕಾರ ರಚಿಸುವ ಹಕ್ಕು ಮಂಡಿಸಲಿಲ್ಲ. ಹೀಗಾಗಿ ಲೆಫ್ಟಿನೆಂಟ್ ಗವರ್ನರ್ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದು, ಅದಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.
ಇದಕ್ಕೆ ರಾಷ್ಟ್ರಪತಿಗಳು ಸಹಿ ಹಾಕಿದ ನಂತರ ವಿಧಾನಸಭೆ ವಿಸರ್ಜನೆಯಾಗಲಿದೆ. ಪುದುಚೇರಿಯಲ್ಲಿ ಆಡಳಿತಾತ್ಮಕ ಕಾರ್ಯಗಳಿಗೆ ಅಗತ್ಯ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಎಂದು ಜಾವಡೇಕರ್ ಹೇಳಿದರು.
ಕಳೆದ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲು ವಿಫಲವಾದ ವಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.