ಹೊಸದಿಲ್ಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಾವಿರಾರು ರೈತರು ಜಮಾಯಿಸಿರುವ ದಿಲ್ಲಿ-ಹರ್ಯಾಣ ಗಡಿಭಾಗದ ಪ್ರದೇಶದಲ್ಲಿ ಮೊಬೈಲ್ ಇಂಟರ್ ನೆಟ್ ಪುನರಾರಂಭಿಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ದಾಖಲಿಸಲಾಗಿದೆ.
ಅರ್ಜಿ ದಾಖಲಿಸಿರುವ ಇಬ್ಬರು ವಕೀಲರಾದ ಸನ್ಪ್ರೀತ್ ಸಿಂಗ್ ಅಜಮಾನಿ ಹಾಗೂ ಪುಷ್ಪೇಂದರ್ ಸಿಂಗ್, ಇಂಟರ್ ನೆಟ್ ಸೇವೆಯ ಸ್ಥಗಿತ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಜನವರಿ 26ರಂದು ದಿಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿಯು ಹಿಂಸಾಚಾರಕ್ಕೆ ತಿರುಗಿದ ಬಳಿಕ ಸಮಸ್ಯೆಯನ್ನು ತಡೆಗಟ್ಟಲು ರೈತರ ಪ್ರತಿಭಟನಾಸ್ಥಳಗಳಲ್ಲಿ ಅಧಿಕಾರಿಗಳು ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದರು.ಜ.26ರಂದು ಸೆಂಟ್ರಲ್ ದಿಲ್ಲಿಯ ಐಟಿಒ ಸಮೀಪ ಟ್ರ್ಯಾಕ್ಟರ್ ಪಲ್ಟಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆಯನ್ನು ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯದಲ್ಲಿ ಸುಪ್ರೀಂಕೋರ್ಟ್ ಮೂಲಭೂತ ಹಕ್ಕಿನ ಭಾಗವಾಗಿ ಅಂತರ್ಜಾಲ ಪ್ರವೇಶವನ್ನು ಎತ್ತಿಹಿಡಿದಿದೆ. ಇಂಟರ್ನೆಟ್ ಮುಚ್ಚುವ ಮೂಲಕ ರೈತರು ಹಾಗೂ ಪತ್ರಕರ್ತರು ನೈಜ ಚಿತ್ರಣವನ್ನು ರಾಷ್ಟ್ರದ ಮುಂದೆ ತರುವುದನ್ನು ತಡೆಯಲು ಸರಕಾರ ಯತ್ನಿಸುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.