ನವದೆಹಲಿ: ಕೇಂದ್ರ ಸರ್ಕಾರದ ಎಲ್ಲ ನೌಕರರು ಕಚೇರಿಗೆ ಬಂದು ಕಾರ್ಯನಿರ್ವಹಿಸಬೇಕು ಎಂದು ಸಿಬ್ಬಂದಿ ಸಚಿವಾಲಯ ನಿರ್ದೇಶನ ನೀಡಿದೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ, ಕಂಟೈನ್‌ಮೆಂಟ್ ವಲಯಗಳಲ್ಲಿ ವಾಸಿಸುವ ಎಲ್ಲ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಇವರು ಮನೆಯಿಂದಲೇ ಕಾರ್ಯನಿರ್ವಹಿಸಬೇಕು. ಕಂಟೈನ್‌ಮೆಂಟ್ ವಲಯ ಎನ್ನುವುದನ್ನು ತೆಗೆದುಹಾಕಿದ ನಂತರವೇ ಕಚೇರಿಗೆ ಬರಬೇಕು ಎಂದು ಸೂಚಿಸಲಾಗಿದೆ.
ಕಚೇರಿಯಲ್ಲಿ ದಟ್ಟಣೆಯಾಗದಂತೆ ಬೇರೆ, ಬೇರೆ ಸಮಯದಲ್ಲಿ ನೌಕರರು ಕಚೇರಿಗೆ ಹಾಜರಾಗಬೇಕು. ಈ ಬಗ್ಗೆ ಆಯಾ ಇಲಾಖೆಗಳ ಮುಖ್ಯಸ್ಥರು ನೌಕರರಿಗೆ ಸಮಯವನ್ನು ನಿಗದಿಪಡಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಬಯೋಮೆಟ್ರಿಕ್ ಹಾಜರಾತಿ ಸ್ಥಗಿತಗೊಳಿಸಿರುವುದನ್ನು ಮುಂದುವರಿಸಬೇಕು. ಅಧಿಕಾರಿಗಳು ಸಭೆಗಳನ್ನು ಸಾಧ್ಯವಾದಷ್ಟು ವಿಡಿಯೊ ಕಾನ್ಫೆರೆನ್ಸ್ ಮೂಲಕವೇ ನಡೆಸಲು ಪ್ರಯತ್ನಿಸಬೇಕು. ಎಲ್ಲ ಇಲಾಖೆಗಳ ಕ್ಯಾಂಟೀನ್‌ಗಳನ್ನು ಆರಂಭಿಸಬಹುದು ಎಂದು ತಿಳಿಸಲಾಗಿದೆ.
ಇದುವರೆಗೆ, ಅಧೀನ ಕಾರ್ಯದರ್ಶಿ ಮತ್ತು ಅವರಿಗಿಂತ ಹಿರಿಯ ಅಧಿಕಾರಿಗಳು ಮಾತ್ರ ಕಚೇರಿಗೆ ಬರುತ್ತಿದ್ದರು. ಮೇ ತಿಂಗಳಲ್ಲಿ ಉಪಕಾರ್ಯದರ್ಶಿಗಿಂತಗಿಂತ ಕೆಳಗಿನ ಹುದ್ದೆಯಲ್ಲಿರುವ ಶೇಕಡ 50ರಷ್ಟು ನೌಕರರು ಎರಡು ಪಾಳಿಯಲ್ಲಿ ಕಚೇರಿಗೆ ಬರಬೇಕು ಎಂದು ಸೂಚಿಸಲಾಗಿತ್ತು. ಇವರಿಗೂ ಬೇರೆ, ಬೇರೆ ಸಮಯವನ್ನು ನಿಗದಿಪಡಿಸಲಾಗಿತ್ತು.