ತಿರುವನಂತಪುರ: ಕಾಂಗ್ರೆಸ್ ಹಾಗೂ ಎಡ ಪಕ್ಷಗಳ ಕಪಟತೆ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಪ್ರಲ್ಹಾದ ಜೋಶಿ, ಎರಡೂ ಪಕ್ಷಗಳು ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಸ್ನೇಹಿತರಾಗಿದ್ದು, ಆದರೆ ಕೇರಳದಲ್ಲಿ ಪರಸ್ಪರ ಸ್ಪರ್ಧಿಸುತ್ತಿದೆ ಎಂದು ಲೇವಡಿ ಮಾಡಿದರು.
ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಕೇರಳದಲ್ಲಿ ಸ್ಪರ್ಧಿಸುತ್ತಿದೆ. ಕೇರಳದಲ್ಲಿ 'ಕುಸ್ತಿ', ದೆಹಲಿಯಲ್ಲಿ 'ದೋಸ್ತಿ'. ಈ ಪಕ್ಷಗಳ ಬೂಟಾಟಿಕೆಯನ್ನು ನೋಡಿ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಕೂಡಾ ದೆಹಲಿಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅತ್ಯಗತ್ಯವಾಗಿದೆ ಎಂದು ಆರೋಪ ಮಾಡಿದರು.
ಎಡಪಂಥೀಯರ ಕಪಟತೆಯೆಂದರೆ ಪಶ್ಚಿಮ ಬಂಗಾಳ ಹಾಗೂ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ. ಅವರು (ಕಾಂಗ್ರೆಸ್ ಹಾಗೂ ಎಡರಂಗ) ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಸ್ನೇಹಿತರಾಗಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಇದನ್ನೇ ಕೇಳ ಬಯಸುತ್ತೇನೆ. ನೀವು ಪ್ರಜಾಪ್ರಭುತ್ವ ಅಥವಾ ಕಪಟತೆಯ ಮೇಲೆ ನಂಬಿಕೆ ಇರಿಸುವೀರಾ ಎಂದು ಪ್ರಶ್ನಿಸಿದರು.
ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ವಿಭಿನ್ನ ಮೈತ್ರಿಯನ್ನು ಹೊಂದಿದೆ. ಈ ಕುರಿತು ರಾಹುಲ್ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪ್ರಲ್ಹಾದ ಜೋಶಿ ಆಗ್ರಹಿಸಿದರು.
ಟ್ರ್ಯಾಕ್ಟರ್ ಚಾಲನೆ ಮಾಡಿ ರಾಹುಲ್ ಗಾಂಧಿ ನಟರಾಗಲು ಬಯಸುತ್ತಿದ್ದಾರೆ. ಅಷ್ಟಕ್ಕೂ ಎಪಿಎಂಸಿಯನ್ನು ನೀವು ಬೆಂಬಲಿಸುವುದಾದರೆ ಕೇರಳದಲ್ಲಿ ಏಕೆ ಅನುಷ್ಠಾನಗೊಳಿಸಿಲ್ಲ ಎಂದು ಪ್ರಶ್ನಿಸಿದರು.