ಠಾಕೂರ್ ನಗರ: ದೇಶದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಮುಗಿದ ತಕ್ಷಣ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ(ಸಿಎಎ) ಜಾರಿಗೊಳಿಸುವ ಮೂಲಕ ನಿಮ್ಮೆಲ್ಲರಿಗೂ ಪೌರತ್ವ ನೀಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಹೇಳಿದ್ದಾರೆ.
ಇಂದು ಪಶ್ಚಿಮ ಬಂಗಾಳದ ಠಾಕೂರ್‍ನಗರದ ಮಾಟುವಾ ಕೋಟೆಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, "ಸಿಎಎಗೆ ಮುಸ್ಲಿಮರ ಪೌರತ್ವ ಕಸಿದುಕೊಳ್ಳುವ ಯಾವುದೇ ನಿಬಂಧನೆ ಇಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಕಳೆದ 70 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಜನರಿಗೆ ಪೌರತ್ವ ನೀಡಲು ನಾವು ಬಯಸುತ್ತೇವೆ. ವದಂತಿಗಳಿಗೆ ಗುರಿಯಾಗಬೇಡಿ" ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಅಲ್ಪಸಂಖ್ಯಾತರ ದಾರಿ ತಪ್ಪಿಸುತ್ತಿವೆ. ಸಿಎಎ ಜಾರಿಗೊಳಿಸುವುದರಿಂದ ಯಾವುದೇ ಅಲ್ಪ ಸಂಖ್ಯಾತರ ಪೌರತ್ವಕ್ಕೆ ಸಮಸ್ಯೆಯಾಗುವುದಿಲ್ಲ ಎಂದು ಭರವಸೆ ನೀಡಿದರು.
1.8 ಕೋಟಿ ಪ್ರಬಲ ಮಾಟುವಾ ಸಮುದಾಯ ಪಶ್ಚಿಮ ಬಂಗಾಳದ ಸುಮಾರು 70 ವಿಧಾನಸಭಾ ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಪೌರತ್ವ ನೀಡುವ ಭರವಸೆ ನೀಡಿದ ನಂತರ 2019ರಲ್ಲಿ ಈ ಮಾಟುವಾ ಸಮುದಾಯ ತಮ್ಮ ನಿಷ್ಠೆಯನ್ನು ಟಿಎಂಸಿಯಿಂದ ಬಿಜೆಪಿಗೆ ಶಿಫ್ಟ್ ಮಾಡಿದ್ದಾರೆ.