ಬದಿಯಡ್ಕ: ಬದಲಾಗುತ್ತಿರುವ ಆಹಾರ ಪದ್ಧತಿ ಜನರ ಆರೋಗ್ಯದ ಮೇಲೆ ವ್ಯಾಪಕ ದುಷ್ಪರಿಣಾಮ ಬೀರುತ್ತಿದ್ದು, ಮುಂಜಾಗ್ರತೆ ಪಾಲಿಸುವುದು ಅನಿವಾರ್ಯ ಎಂದು ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯೆ ನಳಿನಿಕೃಷ್ಣ ಮಲ್ಲಮೂಲೆ ತಿಳಿಸಿದ್ದಾರೆ.
ಅವರು ಕುಂಬ್ಡಾಜೆ ಮವ್ವಾರು ಷಡಾನನ ಯುವಕ ಮಂಡಲ ಮತ್ತು ಗ್ರಂಥಾಲಯ ಸಮಿತಿ ಹಾಗೂ ಕೆಎಂಸಿ ಮಂಗಳೂರು ವತಿಯಿಂದ ಆಯೋಜಿಸಲಾದ ಲಾಯಲ್ಟಿ ಆರೋಗ್ಯ ಕಾರ್ಡು ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಷಡಾನನ ಗ್ರಂಥಾಲಯ ಸಮಿತಿ ಅಧ್ಯಕ್ಷ ಗಣೇಶ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಸದಸ್ಯೆ ಯಶೋಧಾ ಉಪಸ್ಥಿತರಿದ್ದರು. ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಉದಯ ಜೆ. ಆರೋಗ್ಯ ಕಾರ್ಡಿನ ಬಗ್ಗೆ ಮಾಹಿತಿ ನೀಡಿದರು. ಕೃಷ್ಣಮೂರ್ತಿ ಸ್ವಾಗತಿಸಿ, ಸೀತಾರಾಮ ಭಟ್ ವಂದಿಸಿದರು.