ಬೆಂಗಳೂರು: ಬೊಜ್ಜು ಹೊಂದಿರುವ ವ್ಯಕ್ತಿಗಳ ಮೇಲೆ ಕೊರೊನಾ ಲಸಿಕೆ ಪೂರ್ಣ ಪ್ರಮಾಣದಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಹಾಮಾರಿ ಕೊರೋನಾ ವೈರಸ್ ಈಗಾಗಲೇ ಇಡೀ ವಿಶ್ವವನ್ನು ಆತಂಕದಲ್ಲಿ ಇರಿಸಿದ್ದು, ಈ ನಡುವಲ್ಲೇ ತಜ್ಞರು ನೀಡುತ್ತಿರುವ ಹೇಳಿಕೆಗಳು ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. ಹೀಗಾಗಿ ಬೊಜ್ಜು ಹಾಗೂ ಕೊರೋನಾ ನಡುವೆ ನೇರ ಸಂಬಂಧವಿದೆಯೇ ಎಂಬುದರ ಕುರಿತು ಸಾಕಷ್ಟು ಅಧ್ಯಯನಗಳು ನಡೆಯುವ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
ಹವಾಮಾನ ಬದಲಾವಣೆಗಳಿಂದ ಬರುವ ಜ್ವರ, ಶೀತ ಹಾಗೂ ಇನ್ನಿತರೆ ಜ್ವರ, ರೋಗ ನಿರೋಧಕ ಶಕ್ತಿಯ ಮೇಲೂ ಸ್ಥೂಲಕಾಯ (ಬೊಜ್ಜು) ಪರಿಣಾಮ ಬೀರುತ್ತದೆ. ಈ ಆಯಾಮದಲ್ಲಿ ನೋಡುವುದಾದರೆ ಲಸಿಕೆಗಳ ಪರಿಣಾಮಗಳು ವಿಭಿನ್ನವಾಗಿರಬಹುದು. ಲಸಿಕೆಗಳನ್ನು ವಿನ್ಯಾಸಗೊಳಿಸಲು ವಿಭಿನ್ನ ರೀತಿಯ ತಂತ್ರಜ್ಞಾನಗಳನ್ನು ಬಳಕೆ ಮಾಡಿಸಲಾಗುತ್ತದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಅಧ್ಯಯನ ನಡೆಸಬೇಕಾಗುತ್ತದೆ ಎಂದು ವೈದ್ಯೆ ಸ್ವಾತಿ ರಾಜಗೋಪಾಲ್ ಅವರು ಹೇಳಿದ್ದಾರೆ.
ಜ್ವರ ಅಥವಾ ಇತರೆ ರೋಗಗಳಿಗೆ ಲಸಿಕೆಯನ್ನು ಜನರಿಗೆ ನೀಡಿದಾಗ, ಸಣ್ಣಗಿರುವ ಜನರ ಮೇಲೆ ಪರಿಣಾಮ ಬೀರುವಂತೆ ಬೊಜ್ಜುಳ್ಳ ವಯಸ್ಕ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಈ ಕುರಿತ ಅಧ್ಯಯನಗಳನ್ನು ಕಾದು ನೋಡಬೇಕಿದೆ ಎಂದು ಮತ್ತೊಬ್ಬ ವೈದ್ಯರು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬಳ್ಳಾರಿಯಲ್ಲಿ ಲಸಿಕೆ ಪಡೆದುಕೊಂಡಿದ್ದ 43 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ನಿಂದಾಗಿ ಹಾಗೂ ಬೊಜ್ಜು ಹೆಚ್ಚಾಗಿದ್ದರಿಂದಲೂ ವ್ಯಕ್ತಿ ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತು.
ಕೆಲ ವರ್ಗದ ಜನರ ಮೇಲೆ ಲಸಿಕೆ ಪರಿಣಾಮ ಬೀರುತ್ತಿದೆಯೋ ಅಥವಾ ಇಲ್ಲವೋ ಎಂಬುದನ್ನು ಅಧ್ಯಯನ ಮೂಲಕ ಕಂಡು ಹಿಡಿಯಬೇಕಿದೆ. ಬೊಜ್ಜುಳ್ಳ ವ್ಯಕ್ತಿ ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಆದರೆ, ನಮಗಿನ್ನೂ ಲಸಿಕೆಯ ಪರಿಣಾಮಕಾರಿ ಬಗ್ಗೆ ಸೂಕ್ತವಾಗಿ ತಿಳಿಯಲು ಸಾಧ್ಯವಾಗುತ್ತಿಲ್ಲ ಎಂದು ಅಪೋಲೋ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯ ಸುಮಿತ್ ತಳ್ವಾರ್ ಅವರು ಮಾತನಾಡಿ, ಲಸಿಕೆ ಬೊಜ್ಜುಳ್ಳ ಹಾಗೂ ಬೊಜ್ಜು ಇಲ್ಲದವರಿಬ್ಬರಿಗೂ ಪ್ರಯೋಜನಕಾರಿಯಾಗಿದೆ. ಫೈಜರ್ ಲಸಿಕೆಯನ್ನು ಎಲ್ಲಾ ಗುಂಪಿನ ಜನರ ಮೇಲೆ ಪ್ರಯೋಗ ಮಾಡಲಾಗಿತ್ತು. ಈ ಲಸಿಕೆ ಶೇ.95ರಷ್ಟು ಪರಿಣಾಮಕಾರಿಯಾಗಿತ್ತು. ಆದರೆ, ಬೊಜ್ಜುಳ್ಳ ವ್ಯಕ್ತಿಗೆ ಹೆಚ್ಚಿನ ಡೋಸ್ ಲಸಿಕೆ ನೀಡಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆಗೆ ಸ್ಪಷ್ಟ ಮಾಹಿತಿಗಳು ಸಿಕ್ಕಿಲ್ಲ. ಏನೇ ಆದರೂ ಬೊಜ್ಜು ಸಮಸ್ಯೆಯುಳ್ಳ ವ್ಯಕ್ತಿ ಕೂಡ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.