ಕಾಸರಗೋಡು: ಕೇರಳ-ಕರ್ನಾಟಕ ಗಡಿ ವಿಷಯದಲ್ಲಿ ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಮೃದುಗೊಳಿಸಿದೆ. ಗಡಿಯಾಚೆಗಿನ ಪ್ರಯಾಣಕ್ಕೆ ಎರಡು ದಿನಗಳವರೆಗೆ ಕೋವಿಡ್ ಪ್ರಮಾಣಪತ್ರ ಕಡ್ಡಾಯವಿರುವುದಿಲ್ಲ. ಗಡಿ ನಿಯಂತ್ರಣವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ನಲ್ಲಿ ಕಾಂಗ್ರೆಸ್ಸ್ ಸಲ್ಲಿಸಿದ ಅರ್ಜಿ ಇಂದು ಪರಿಗಣನೆಗೆ ಬರಲಿದೆ. ಏತನ್ಮಧ್ಯೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಸೋಮವಾರದಿಂದ ಕೇರಳ-ಕರ್ನಾಟಕ ಗಡಿಯುದ್ದಕ್ಕೂ ಪ್ರಯಾಣಿಸಲು ಕೋವಿಡ್ ನಕಾರಾತ್ಮಕ ಪ್ರಮಾಣಪತ್ರ ಕಡ್ಡಾಯವಾಗಲಿದೆ ಎಂದು ಕರ್ನಾಟಕ ಸರ್ಕಾರ ಹೇಳಿತ್ತು. ಆದರೆ, ಸ್ಥಳೀಯರು ಮೊನ್ನೆ ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕರ್ನಾಟಕ ತನ್ನ ನಿಲುವನ್ನು ಮೃದುಗೊಳಿಸಿತು.
ಇದರೊಂದಿಗೆ ಪ್ರಯಾಣಿಕರಿಗೆ ತಲಪಾಡಿ ಸೇರಿದಂತೆ ಗಡಿ ದಾಟಲು ನಿನ್ನೆ ತಪಾಸಣೆ ಇಲ್ಲದೆ ಅವಕಾಶ ನೀಡಲಾಯಿತು. ಈ ವಿಷಯದಲ್ಲಿ ತಕ್ಷಣದ ಹಸ್ತಕ್ಷೇಪ ಕೋರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಅಂತರ್ ರಾಜ್ಯ ಪ್ರಯಾಣವನ್ನು ನಿಯಂತ್ರಿಸಬಾರದು ಎಂಬ ಕೇಂದ್ರ ಸರ್ಕಾರದ ಸಲಹೆಗೆ ವಿರುದ್ಧವಾಗಿ ಕರ್ನಾಟಕ ಕಾನೂನು ರೂಪಿಸಿದೆ ಎಂದು ಕೇರಳದ ಮುಖ್ಯಮಂತ್ರಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಗಡಿಗಳನ್ನು ಮುಚ್ಚಲು ಪ್ರಯತ್ನಿಸುತ್ತಿಲ್ಲ ಎಂಬುದು ಕರ್ನಾಟಕ ಸರ್ಕಾರದ ವಿವರಣೆಯಾಗಿದೆ. ಜನರ ಸುರಕ್ಷತೆಗಾಗಿ ಕೋವಿಡ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ ಮತ್ತು ಅದಕ್ಕಾಗಿಯೇ ಅಂತರ್ ರಾಜ್ಯ ಪ್ರಯಾಣಕ್ಕೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಹೇಳಿರುವರು. ನಿರ್ಧಾರ ಹಿಂತೆಗೆದುಕೊಳ್ಳುವವರೆಗೂ ಪ್ರತಿಭಟನೆ ಮುಂದುವರಿಯುವುದಾಗಿ ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಹೇಳಿದರು.