ಮಂಗಳೂರು: ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ, ದಕ್ಷಿಣ ಕನ್ನಡ-ಕೇರಳ ಗಡಿಯಲ್ಲಿ ಅಗತ್ಯ ಎಚ್ಚರಿಕೆಯನ್ನು ಕೈಗೊಳ್ಳಲಾಗಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ತರುವಂತೆ ಸೂಚನೆ ನೀಡಲಾಗಿದೆ.
ಕೇರಳದಲ್ಲಿ ಸೋಂಕು ಪ್ರರಕಣ ಹೆಚ್ಚಾಗುತ್ತಿದ್ದು ರಾಜ್ಯದ ಗಡಿ ಬಂದ್ ಮಾಡುವುದಕ್ಕೆ ಅವಕಾಶವಿಲ್ಲ. ಹಾಗಾಗಿ, ಕೇರಳದಿಂದ ನಗರಕ್ಕೆ ಆಗಮಿಸುವ ವಿದ್ಯಾರ್ಥಿಗಳು ಅಥವಾ ಇತರೆ ಉದ್ಯೋಗಿಗಳು ಕಡ್ಡಾಯವಾಗಿ 72 ಗಂಟೆ ಒಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರಬೇಕು. ಇಲ್ಲವಾದರೆ 14 ದಿನ ಕ್ವಾರಂಟೈನ್‌ನಲ್ಲಿ ಇರಬೇಕು. ಈ ಬಗ್ಗೆ ಸಂಬಂಧ ಪಟ್ಟ ಶಿಕ್ಷಣ ಸಂಸ್ಥೆ ಹಾಗೂ ಕಂಪನಿಗಳ ಮುಖ್ಯಸ್ಥರು ನಿಗಾ ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಹೇಳಿದ್ದಾರೆ.
ಜಿಲ್ಲೆಗೆ ವಿದ್ಯಾರ್ಥಿಗಳು, ಸಾರ್ವಜನಿಕರ ಸಂಚಾರಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ ಸೂಕ್ತ ತಪಾಸಣೆಗೊಳಪಡಿಸಿ ಕೋವಿಡ್ ಹರಡದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ. ಕೊರೋನಾ ನೆಗೆಟಿವ್ ವರದಿ ಪರಿಶೀಲಿಸಲು ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ಎಲ್ಲಾ 14 ಅಂತರ ರಾಜ್ಯ ಗಡಿಗಳಲ್ಲಿ ನಿಯೋಜಿಸಲಾಗುವುದು. ಸಾಧ್ಯವಾದರೆ, ಕೆಲವು ಚೆಕ್ ಪೋಸ್ಟ್‌ಗಳಲ್ಲಿ ಜನರ ಪ್ರಯಾಣ ನಿಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕೇರಳದಿಂದ ಬರುವ ಸಿಬ್ಬಂದಿಗಳಿಗೆ 15 ದಿನಗಳಿಗೊಮ್ಮೆ ಕೋವಿಡ್ ನಕಾರಾತ್ಮಕ ವರದಿಗಳನ್ನು ಪಡೆದು ಉದ್ಯೋಗ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಕೇರಳದಿಂದ ಆಗಮಿಸುವ ರೋಗಿಗಳ ಪರಿಚಾರಕರನ್ನು ಕೋವಿಡ್ ಪರೀಕ್ಷೆಗಳಿಗೆ ಒಳಪಡಿಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ.
ಕೋವಿಡ್ ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಯಾವುದೇ ಹಿಂಜರಿಕೆಯಿಲ್ಲದೆ ಲಸಿಕೆ ತೆಗೆದುಕೊಳ್ಳಲು ಹೋಗಬೇಕೆಂದು ಡಿಸಿ ಮನವಿ ಮಾಡಿದರು. 55,523 ಮುಂಚೂಣಿ ಕಾರ್ಮಿಕರಲ್ಲಿ 30,257 ಮಂದಿ ಮಾತ್ರ ಮಂಗಳವಾರದವರೆಗೆ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಡ್ಡ ಪರಿಣಾಮಗಳ ಭಯದಿಂದ ಹಲವು ಮಂದಿ ಇನ್ನೂ
ಲಸಿಕೆ ತೆಗೆದುಕೊಂಡಿಲ್ಲ, ಲಸಿಕೆ ತೆಗೆದುಕೊಂಡ ನಂತರ ಆಲ್ಕೋಹಾಲ್ ಸೇವಿಸಬಾರದು ಎಂಬ ನಿಯಮವಿದೆ. ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.