ಮಂಜೇಶ್ವರ: ಮಂಜೇಶ್ವರ ಪಶುವೈದ್ಯಕೀಯ ಆಸ್ಪತ್ರೆಗಾಗಿ ಹೊಸದಾಗಿ ನಿರ್ಮಿಸಲಾದ ಕಟ್ಟಡವನ್ನು ನಿನ್ನೆ ಸಚಿವ ರಾಜು ಉದ್ಘಾಟಿಸಿದರು. ಆಸ್ಪತ್ರೆಯ ಕಟ್ಟಡವನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ 34 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಮಂಜೇಶ್ವರ ಪಶುವೈದ್ಯಕೀಯ ಆಸ್ಪತ್ರೆಯನ್ನು 24 ಗಂಟೆಗಳ ಕಾರ್ಯಾಚರಣೆಗೆ ಆಸ್ಪದವಾಗುವಂತೆ ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ವಹಿಸಿದ್ದರು. ಜಿಲ್ಲಾ ಪಶು ವೈದ್ಯಕೀಯ ಮುಖ್ಯ ಅಧಿಕಾರಿ ಡಾ.ವಿ. ನಾಗರಾಜ್ ವರದಿ ಮಂಡಿಸಿದರು. ಸಮಾರಂಭದಲ್ಲಿ ವಿವಿಧ ಜನ ಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗವಹಿಸಿದ್ದರು. ರಮೇಶನ್ ಅವರನ್ನು ಗೌರವಿಸಲಾಯಿತು. ಸಂತೋಷ್ ಕುಮಾರ್ (ಅನಿಮಲ್ ವೆಲ್ಫೇರ್ ಟ್ರಸ್ಟ್, ಕಾಸರಗೋಡು) ಜಿಲ್ಲೆಯ ಅತ್ಯುತ್ತಮ ಪ್ರಾಣಿ ಕಲ್ಯಾಣ ಕಾರ್ಯಗಳಿಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೊ ಸ್ವಾಗತಿಸಿ, ಹಿರಿಯ ಪಶುವೈದ್ಯ ಶಸ್ತ್ರಚಿಕಿತ್ಸಕ ಡಾ. ಬಾಲಚಂದ್ರ ರಾವ್.ಬಿ.ವಿ ವಂದಿಸಿದರು.