ಭಾರತವು 3ನೇ ಅತಿಹೆಚ್ಚು ಲಸಿಕೆ ವಿತರಿಸಿದ ದೇಶ:
ದೇಶದಲ್ಲಿ ಜನವರಿ.16ರಂದು ಮೊದಲ ಬಾರಿಗೆ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಅಂದಿನಿಂದ ಈವರೆಗೂ 57,75,322 ಜನರಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ವಿಶ್ವದಲ್ಲೇ ಅತಿಹೆಚ್ಚು ಜನರಿಗೆ ಲಸಿಕೆ ನೀಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 3.68 ಕೋಟಿ ಲಸಿಕೆ ವಿತರಿಸಿದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಗ್ರಸ್ಥಾನದಲ್ಲಿದೆ. 1.14 ಕೋಟಿ ಜನವರಿಗೆ ಲಸಿಕೆ ನೀಡಿರುವ ಇಂಗ್ಲೆಂಡ್ ಎರಡನೇ ಸ್ಥಾನದಲ್ಲಿದೆ.
12 ರಾಜ್ಯಗಳಲ್ಲಿ 2 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಲಸಿಕೆ:
ಭಾರತದಲ್ಲಿ ಒಟ್ಟು ಕೊರೊನಾವೈರಸ್ ಲಸಿಕೆ ಪಡೆದವರ ಸಂಖ್ಯೆ 57.75 ಲಕ್ಷಕ್ಕಿಂತ ಹೆಚ್ಚಾಗಿದೆ. ಈ ಪೈಕಿ ದೇಶದ 12 ರಾಜ್ಯಗಳಲ್ಲಿ 2 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ಈ ರಾಜ್ಯಗಳ ಪಟ್ಟಿ ಇಲ್ಲಿದೆ.
ರಾಜ್ಯ - ಲಸಿಕೆ ಪಡೆದವರ ಸಂಖ್ಯೆ:
ಉತ್ತರ ಪ್ರದೇಶ - 6,73,542
ಮಹಾರಾಷ್ಟ್ರ - 4,73,480
ರಾಜಸ್ಥಾನ - 4,59,652
ಗುಜರಾತ್ - 4,38,573
ಕರ್ನಾಟಕ - 3,86,186
ಬಿಹಾರ - 3,74,538
ಪಶ್ಚಿಮ ಬಂಗಾಳ - 3,54,000
ಮಧ್ಯಪ್ರದೇಶ - 3,42,016
ಆಂಧ್ರಪ್ರದೇಶ - 2,99,649
ಕೇರಳ - 2,91,852
ಒಡಿಶಾ - 2,75,055
ತೆಲಂಗಾಣ - 2,09,104
9 ತಿಂಗಳ ನಂತರ 80ಕ್ಕಿಂತ ಕಡಿಮೆ ಮಂದಿ ಸಾವು:
ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಹೊಸ ದಾಖಲೆಯಾಗಿದೆ. 9 ತಿಂಗಳ ನಂತರದಲ್ಲಿ ಮೊದಲ ಬಾರಿಗೆ 24 ಗಂಟೆಗಳಲ್ಲಿ ಮೃತಪಟ್ಟವರ ಸಂಖ್ಯೆ 80ಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಸೋಂಕಿಗೆ 78 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1,54,996ಕ್ಕೆ ಏರಿಕೆಯಾಗಿದೆ. ಕಳೆದೊಂದು ದಿನದಲ್ಲಿ 12059 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 1,08,26,363ಕ್ಕೆ ಏರಿಕೆಯಾಗಿದೆ. 1,48,766 ಸಕ್ರಿಯ ಪ್ರಕರಣಗಳಿವೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9 ತಿಂಗಳಿನಲ್ಲಿ ಅತಿ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 78 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದಾರೆ. ಆದರೆ ಈ ಪೈಕಿ 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ಒಂದು ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.