ಲಖನೌ: ಅಯೋಧ್ಯೆ ಮಸೀದಿ ನಿರ್ಮಾಣಕ್ಕೆ ನೀಡಿರುವ ಜಮೀನಿನ ಮಾಲೀಕತ್ವವನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮಸೀದಿ ನಿರ್ಮಿಸಲು ಧನ್ನಿಪುರ ಗ್ರಾಮದಲ್ಲಿ ನೀಡಿರುವ ನಿವೇಶನದ ಮಾಲೀಕತ್ವ ತಮ್ಮದು ಎಂದು ಹೇಳಿಕೊಂಡು ದೆಹಲಿ ಮೂಲದ ಸಹೋದರಿಯರಾದ ರಾಣಿ ಕಪೂರ್ ಅಲಿಯಾಸ್ ರಾಣಿ ಬಲೂಜಾ, ರಮಾರಾಣಿ ಪಂಜಾಬಿ ಎಂಬುವರು ಕೋರ್ಟ್ ಮೊರೆ ಹೋಗಿದ್ದರು.
ಮಸೀದಿ ನಿರ್ಮಾಣಕ್ಕೆ ಮಂಜೂರಾಗಿರುವ ಜಮೀನು ಸಂಖ್ಯೆ ಮತ್ತು ಅರ್ಜಿಯಲ್ಲಿ ನಮೂದಿಸಿರುವ ಜಮೀನಿನ ಸಂಖ್ಯೆ ಭಿನ್ನವಾಗಿವೆ ಎಂದು ಹೆಚ್ಚುವರಿ ಅಡ್ವಕೇಟ್ ಜನರಲ್ ರಮೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
'ಅರ್ಜಿದಾರರ ಪರ ವಕೀಲರು ಸತ್ಯವನ್ನು ತಿಳಿಯದೇ ಆತುರದಲ್ಲಿ ಅರ್ಜಿ ಸಲ್ಲಿಸಿದಂತಿದೆ' ಎಂದು ನ್ಯಾಯಮೂರ್ತಿಗಳಾದ ಡಿ.ಕೆ.ಉಪಾಧ್ಯಾಯ ಮತ್ತು ಮನೀಶ್ ಕುಮಾರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ಐದು ಎಕರೆ ಜಾಗವನ್ನು 2019ರ ನ.7ರಂದು ನೀಡಲಾಯಿತು. ಈ ನಿವೇಶನದಲ್ಲಿ ಮಸೀದಿ ನಿರ್ಮಾಣಕ್ಕೆ ಜ. 26ರಂದು ಶಿಲಾನ್ಯಾಸ ನೆರವೇರಿಸಲಾಗಿದೆ.