ತಿರುವನಂತಪುರ: ಕೇರಳ ಕಾಂಗ್ರೆಸ್ (ಎಂ) ಕುರಿತಂತೆ ಚುನಾವಣಾ ಆಯೋಗ ನೀಡಿರುವ ಆದೇಶವನ್ನು ಕೇರಳ ಹೈಕೋರ್ಟಿನ ವಿಭಾಗೀಯ ಪೀಠವು ಸೋಮವಾರ ಎತ್ತಿ ಹಿಡಿಯಿತು. ಈ ಮೂಲಕ ಜೋಸ್ ಕೆ ಮಣಿ ಬಣದ ಕಾಂಗ್ರೆಸ್ ಅಧಿಕೃತ ಕೇರಳ ಕಾಂಗ್ರೆಸ್ (ಎಂ) ಎಂಬ ತೀರ್ಪು ಸಿಕ್ಕಿದೆ. ಇದರ ಜೊತೆಗೆ ವಿವಾದಿತ ''ಎರಡು ಎಲೆ'' ಚುನಾವಣೆ ಚಿಹ್ನೆ ಕೂಡಾ ಅಧಿಕೃತವಾಗಿ ಕೇರಳ ಕಾಂಗ್ರೆಸ್ (ಎಂ) ಪಾಲಾಗಿದೆ.
ಇನ್ನೊಂದೆಡೆ ಕಾಂಗ್ರೆಸ್ ಮೈತ್ರಿಯಿಂದ ಕಾಂಗ್ರೆಸ್ (ಎಂ) ದೂರಾಗಿದ್ದು, ಯುಡಿಎಫ್ ಬಣದಲ್ಲಿ ಕೇರಳ ಕಾಂಗ್ರೆಸ್(ಥಾಮಸ್ ಬಣ) ಸೇರ್ಪಡೆಯಾಗುವ ಸಾಧ್ಯತೆಯಿದೆ.
ಕೇರಳ: ಎನ್ಡಿಎ ಮೈತ್ರಿ ತೊರೆಯಲು ಸಜ್ಜಾದ ಕೇರಳ ಕಾಂಗ್ರೆಸ್:
ಕೇರಳ ಹೈಕೋರ್ಟ್ ವಿಭಾಗೀಯ ಪೀಠದ ಮುಖ್ಯ ಜಸ್ಟೀಸ್ ಎಸ್ ಮಣಿಕುಮಾರ್ ಅವರು ಪಿಜೆ ಜೋಸೆಫ್ ಅವರು ಮಾಡಿದ್ದ ಮನವಿಯನ್ನು ತಿರಸ್ಕರಿಸಿದರು.
ಸಂವಿಧಾನದ ಪ್ರಕಾರ ಪಕ್ಷದ ಹೆಸರು ಹಾಗೂ ಜನಪ್ರತಿನಿಧಿಗಳ ಕಾಯ್ದೆ ಸೆಕ್ಷನ್ 29ಎ ಅಡಿಯಲ್ಲಿ ಪಕ್ಷದ ಮಾನ್ಯತೆ ಇರುವುದರಿಂದ ಆಯೋಗದ ಆದೇಶವನ್ನು ಎತ್ತಿ ಹಿಡಿಯಲಾಗಿದೆ ಎಂದು ಜಸ್ಟೀಸ್ ಮಣಿಕುಮಾರ್ ಹೇಳಿದರು.
ಚುನಾವಣಾ ಚಿಹ್ನೆ(ಕಾಯ್ದಿರಿಸುವಿಕೆ ಹಾಗೂ ಹಂಚಿಕೆ) 1968 ಕಾಯ್ದೆ ಅಡಿಯಲ್ಲಿ ಎರಡು ಎಲೆ ಚಿಹ್ನೆಯನ್ನು ಕೇರಳ ಕಾಂಗ್ರೆಸ್ (ಎಂ)ಗೆ ನೀಡಲಾಗಿದೆ ಎಂದು ಆಯೋಗ ಹೇಳಿದೆ.