ಸಂಬಲ್ಪುರ: ಬಡವರು ಸುಲಭವಾಗಿ ಚಿಕಿತ್ಸೆ ಪಡೆಯುವಂತಾಗಬೇಕು ಎಂಬ ಕಾಳಜಿಯಿಂದ ಒಡಿಶಾದ ವೈದ್ಯರೊಬ್ಬರು ಸಂಬಲ್ಪುರ ಜಿಲ್ಲೆಯ ಬುರ್ಲಾ ಪಟ್ಟಣದಲ್ಲಿ ಒಂದು ರೂಪಾಯಿ ಕ್ಲಿನಿಕ್ ಆರಂಭಿಸಿದ್ದಾರೆ.
ಬುರ್ಲಾದ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ವಿಐಎಂಎಸ್‌ಎಆರ್) ಸಹಾಯಕ ಪ್ರೊಫೆಸರ್ ಡಾ.ಶಂಕರ್ ರಾಮ್‌ಚಂದಾನಿ ಅವರು ಬುರ್ಲಾದ ಕಚ್ಚಾ ಮಾರುಕಟ್ಟೆ ಪ್ರದೇಶದಲ್ಲಿ ಈ ಕ್ಲಿನಿಕ್ ತೆರೆದಿದ್ದು, ಬೆಳಿಗ್ಗೆ 7ರಿಂದ 8ರವರೆಗೆ ಹಾಗೂ ಸಂಜೆ 6ರಿಂದ 7ರವರೆಗೆ ಕ್ಲಿನಿಕ್ ತೆರೆದಿರುತ್ತದೆ.
'ನಾನು ಸಂಸ್ಥೆಯನ್ನು ಹಿರಿಯ ವಸತಿ ವೈದ್ಯರ ನೆಲೆಯಲ್ಲಿ ಸೇರಿಕೊಂಡಿದ್ದೆ. ಆಗ ನನಗೆ ಖಾಸಗಿ ವೈದ್ಯ ಸೇವೆ ಮಾಡುವುದು ಸಾಧ್ಯವಿರಲಿಲ್ಲ. ನನಗೆ ಈಗ ಬಡ್ತಿ ಸಿಕ್ಕಿದ್ದು, ನಾನು ಈಗ ಖಾಸಗಿ ಕ್ಲಿನಿಕ್ ತೆರೆದು ವೈದ್ಯಕೀಯ ಸೇವೆ ಸಲ್ಲಿಸಬಹುದು. ಹೀಗಾಗಿ ನನ್ನ ಕರ್ತವ್ಯವ ಅವಧಿಯ ಬಳಿಕ ಬಡವರಿಗೆ ಆರೈಕೆ ಮಾಡುವ ಉದ್ದೇಶದಿಂದ ಒಂದು ರೂಪಾಯಿ ಕ್ಲಿನಿಕ್ ತೆರೆದಿದ್ದೇನೆ' ಎಂದು ಶಂಕರ್ ತಿಳಿಸಿದರು.
38 ವರ್ಷದ ಶಂಕರ್ ಅವರು ಉಚಿತ ವೈದ್ಯ ಸೇವೆ ಸಲ್ಲಿಸುವ ಇಚ್ಛೆ ಹೊಂದಿದ್ದರು. ಆದರೆ ಉಚಿತ ಸೇವೆ ಎಂದರೆ ಜನ ತಿರಸ್ಕಾರದಿಂದ ನೋಡುವ ಸಾಧ್ಯತೆ ಇರುತ್ತದೆ, ತಮಗೆ ನೀಡಲಾದ ಚಿಕಿತ್ಸೆಗೆ ಒಂದಿಷ್ಟು ದುಡ್ಡನ್ನಾದರೂ ಪಡೆಯುತ್ತಾರೆ ಎಂಬ ಭಾವನೆ ಜನರಲ್ಲಿ ಇರಲಿ ಎಂಬ ಕಾರಣಕ್ಕೆ ಒಂದು ರೂಪಾಯಿ ಪಡೆಯಲು ಅವರು ನಿರ್ಧರಿಸಿದ್ದಾರೆ. ಶಂಕರ್ ಅವರ ಪತ್ನಿ ಶಿಖಾ ದಂತವೈದ್ಯೆ. ಅವರು ಸಹ ಪತಿಗೆ ನೆರವಾಗುತ್ತಿದ್ದಾರೆ.