ಉಪ್ಪಳ : ಹಿರಿಯ ಮಹಿಳಾ ತಾಳಮದ್ದಳೆ ಅರ್ಥಧಾರಿ, ತಾಳಮದ್ದಳೆ ಸಂಘಟಕಿ ಲೇಖಕಿ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ ಯವರ ಸ್ವಗೃಹದಲ್ಲಿ ಭಾನುವಾರ ಖ್ಯಾತ ಅಂಕಣಕಾರ, ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ಕೃತಿ ಪರಕಾಯ ಪ್ರವೇಶದ ಬಗ್ಗೆ ಕೃತಿ ವಿಮರ್ಶೆ ಹಾಗೂ ಬಳಿಕ ಖ್ಯಾತ ಕಲಾವಿದರಿಂದ ತಾಳಮದ್ದಳೆ ಕಾರ್ಯಕ್ರಮ ಜರಗಿತು.
ಹಿರಿಯ ವಿದ್ವಾಂಸ ಅರ್ಥಧಾರಿ ಡಾ.ಎಂ ಪ್ರಭಾಕರ ಜೋಷಿ ಹಾಗೂ ಹಿರಿಯ ಮಹಿಳಾ ಲೇಖಕಿ ಡಾ.ಯು.ಮಹೇಶ್ವರಿ ಕೃತಿ ವಿಮರ್ಶೆ ನಡೆಸಿಕೊಟ್ಟರು.
ಕೃತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಡಾ.ಜೋಷಿ ಯವರು ಮಾತನಾಡಿ ಲೇಖಕರು ಆಯ್ದುಕೊಂಡ ಕಥನ ತಂತ್ರ ಪರಕಾಯ ಪ್ರವೇಶವನ್ನು ಕಥಾಸಂಗ್ರಹವಾಗಿಸಿದೆ. ವಿಮರ್ಶಕನೂ ಕವಿಯೂ ರವಿಯೂ ಕಾಣದ್ದನ್ನು ಒಬ್ಬ ಭಾಷಣಕಾರ ಕಾಣಬಲ್ಲ, ಸೃಜನ ಶೀಲತೆಗೆ ಸೀಮೆ ಇಲ್ಲ, ಈ ನಿಟ್ಟಿನಲ್ಲಿ ನಾವು ಯಾರಲ್ಲಾದರೂ ವಿಭಿನ್ನ ಶಕ್ತಿ ಇದೆ ಎಂದಾದರೆ ಗೌರವಿಸಲೇ ಬೇಕು. ರಾಮಾಯಣ ಮಹಾಭಾರತಗಳಲ್ಲಿನ ನಿರ್ಲಕ್ಷಿತ ಪಾತ್ರಗಳನ್ನೇ ಆಯ್ದು ಮರು ಹುಟ್ಟು ನೀಡಿ ತನ್ನದೇ ಆದ ನೆಲೆಯಲ್ಲಿ ಆ ಪಾತ್ರವೇ ತಾನಾಗಿ ಈ ಕೃತಿಯಲ್ಲಿ ಕಲ್ಚಾರ್ ಅವರು ಅನಾವರಣ ಗೊಳಿಸಿದ್ದಾರೆ, ಮಾತ್ರವಲ್ಲ ಆ ಪಾತ್ರಗಳಬಗ್ಗೆ ಮರು ಚಿಂತಿಸುವಂತೆ ಮಾಡಿದ್ದು ಪರಕಾಯ ಪ್ರವೇಶದ ಗೆಲುವು. ರಾಮಾಯಣ ಮಹಾಭಾರತ ಗ್ರಂಥಗಳಲ್ಲಿನ ಮೌನವನ್ನು ತುಂಬಿಸುವ ಕಾರ್ಯ ಈ ಕೃತಿಯಿಂದ ಆಗಿದೆ, ಇನ್ನಷ್ಟು ಕೃತಿಗಳು ಲೇಖಕರಿಂದ ಬರಲಿ ಎಂದು ಹಾರೈಸಿದರು.
ಡಾ.ಯು. ಮಹೇಶ್ವರಿ ಮಾತನಾಡಿ ಕೃತಿಯಲ್ಲಿನ ಪ್ರತೀ ಪಾತ್ರಗಳಿಗೂ ಜೀವ ತುಂಬುವ ಕಾರ್ಯ ಲೇಖಕರಿಂದ ನಡೆದಿದೆ. ಅರ್ಥಧಾರಿಯೊಬ್ಬರು ಪುರಾಣ ಪಾತ್ರಗಳ ಕುರಿತಾಗಿ ಆಯಾಪಾತ್ರಗಳ ಸ್ವಗತದ ರೂಪದಲ್ಲಿ ಪ್ರಸ್ತುತ ಪಡಿಸಿರುವ ಈ ಕೃತಿ ಅಂತಹ ವ್ಯಕ್ತಿತ್ವಗಳ ಮರು ಓದಿಗೆ ಪ್ರೇರೇಪಿಸುತ್ತದೆ, ಅಲಕ್ಷಿತ ಪಾತ್ರಗಳನ್ನು ಪೌರಾಣಿಕ ಕಾಲಧರ್ಮಕ್ಕೆ ಅಪಚಾರವಾಗದ ರೀತಿಯಿಂದ ತರುವಲ್ಲಿ ಎಡವಿಲ್ಲ, ಪಾತ್ರಗಳೇ ತಮ್ಮನ್ನು ಸಮರ್ಥಿಸಿಕೊಳ್ಳುವಲ್ಲಿ ಲೇಖಕನ ಅಭಿಪ್ರಾಯ ಸುಳಿಯದಂತೆ ನಿರ್ವಹಿಸಿರುವ ತಂತ್ರ ಗಮನಾರ್ಹ, ಸ್ವತಃ ಅರ್ಥಧಾರಿ ಕಲಾವಿದನಾಗಿರುವ ಕಲ್ಚಾರ್ ಪಾತ್ರಗಳ ಪರಕಾಯ ಪ್ರವೇಶ ಸುಲಲಿತವಾಗಿ ಮಾಡಿದ್ದಾರೆ. ಒಂದೆರಡು ಕಾಲ್ಪನಿಕ ಪಾತ್ರಗಳನ್ನೂ ಸೃಷ್ಟಿಸಿ ಅವುಗಳೂ ಮೂಲ ರಾಮಾಯಣ ಮಹಾಭಾರತ ಗ್ರಂಥಗಳ ಸಹಜ ಪಾತ್ರಗಳು ಎನ್ನುವಂತೆ ಚಿತ್ರಿಸಿದ್ದಾರೆ. ಕೃತಿಯ ಎಲ್ಲಾ ಪಾತ್ರಗಳು ಪುರಾಣ ರಾಮಾಯಣ ಮಹಾಭಾರತ ಕಾಲಕ್ಕೇ ಸೀಮಿತಗೊಳ್ಳದೆ ನಮ್ಮ ಇಂದಿನ ಸಮಾಜದ ಮಧ್ಯೆಯೇ ಇರುವಂತೆ ನಮ್ಮ ಇಂದಿನ ತೊಳಲಾಟಕ್ಕೆ ಪ್ರತಿಬಿಂಬದಂತೆ ಕಾಣಿಸಿಕೊಳ್ಳುತ್ತದೆ. ದಂಡಕ, ವಿಕರ್ಣ, ರಥಕಾರ, ಸುದೇಷ್ಣಾ, ಭದ್ರ, ಪ್ರಾತಿಕಾಮಿ, ಅಶ್ವಸೇನ, ಸಾರಥಿ, ರುಮಾ, ರುರು, ಸಾಲ್ವ, ಹೀಗೆ ಎಲ್ಲಾ ಪಾತ್ರಗಳು ಜೀವತುಂಬಿ ತಮ್ಮ ಆಂತರ್ಯವನ್ನು ಕೃತಿಯಲ್ಲಿ ತೋರ್ಪಡಿಸಿದೆ ಎಂದು ಅಭಿಪ್ರಾಯ ಪಟ್ಟರು.
ಸದಾಶಿವ ಮಾಸ್ತರ್ ಕುಳಾಯಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಹಿರಿಯ ಕಲಾವಿದ ನಾರಾಯಣ ಹೊಳ್ಳ ಕೈರಂಗಳ, ರಾಮ ಕಾರಂತ ಮಂಗಲ್ಪಾಡಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ರಾಧಾಕೃಷ್ಣ ಕಲ್ಚಾರ್ ದಂಪತಿಗಳನ್ನು ಗಣ್ಯರ ಸಮಕ್ಷಮ ಸನ್ಮಾನಿಸಲಾಯಿತು.
ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಜಾರಾಮ ರಾವ್ ಮೀಯಪದವು ನಿರೂಪಿಸಿದರು. ಚಂದನ ಕಾರಂತ ವಂದಿಸಿದರು. ದಿವ್ಯ ಕಾರಂತ ಪ್ರಾರ್ಥನೆ ಗೈದರು. ಬಳಿಕ ಜರಗಿದ ಅಂಗದ ಸಂಧಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಹರೀಶ ಬಳಂತಿಮೊಗರು, ಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪಾತ್ರಧಾರಿಗಳಾಗಿ ಅಂಗದ ರಾಧಾಕೃಷ್ಣ ಕಲ್ಚಾರ್, ಪ್ರಹಸ್ತ ಪ್ರಭಾಕರ ಜೋಶಿ ನಿರ್ವಹಿಸಿದರು.