ನವದೆಹಲಿ: ಕೊರೋನಾ ಔಷಧಿಗೆ ಕೊರೋನಿಲ್ ಔಷಧಿ ಸಿದ್ಧಪಡಿಸಿದ್ದೇವೆ ಎಂದು ಘೋಷಣೆ ಮಾಡಿದ್ದ ಪತಂಜಲಿ ಸಂಸ್ಥೆಯ ಮುಖ್ಯಸ್ಥ ಹಾಗೂ ಯೋಗ ಗುರು ಬಾಬಾ ರಾಮ್ ದೇವ್ ಅವರನ್ನು ಬಂಧಿಸಿ ಎಂಬ ಕೂಗು ಎದ್ದಿದೆ.
ಯೋಗ ಗುರು, ಪತಂಜಲಿ ಸಂಸ್ಥೆಯ ಸಂಸ್ಥಾಪಕ ರಾಮದೇವ್ ಬಾಬಾ ಅವರನ್ನು ಬಂಧಿಸಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ. ಈ ಕುರಿತಂತೆ #ArrestRamdev ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದೆ. ಕೊರೊನಾ ನಿವಾರಣೆಗಾಗಿ ಪತಂಜಲಿ ಸಂಸ್ಥೆ 'ಕೊರೊನಿಲ್' ಎಂಬ ಔಷಧಿಯನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿದೆ. ಔಷಧಿ ಬಿಡುಗಡೆಯ ಸಮಯದಲ್ಲಿ, ‘ಕರೋನೆಲ್’ ಗೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣಪತ್ರ ಸಿಕ್ಕಿದೆ ಎಂದು ಹೇಳುವ ಮೂಲಕ ಬಾಬಾ ರಾಂ ದೇವ್ ಎಲ್ಲರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ಮೋಸ ಮಾಡಲು ನೋಡಿದ ಯೋಗ ಗುರುವನ್ನು ಬಂಧಿಸುವಂತೆ ಹಲವು ಆರೋಗ್ಯ ಸಂಸ್ಥೆಗಳು ಹಾಗೂ ಸಾಮಾಜಿಕ ಗುಂಪುಗಳು ಒತ್ತಾಯಿಸುತ್ತಿವೆ. ಈ ಹಿನ್ನಲೆಯಲ್ಲಿ ಬಾಬಾ ರಾಂ ದೇವ್ ಅವರನ್ನು ಬಂಧಿಸಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಸೋಮವಾರ ನವದೆಹಲಿ ಪೊಲೀಸರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.
ಪ್ರೀತಿಯ ದೆಹಲಿ ಪೊಲೀಸರೇ .. ವಿಶ್ವ ಆರೋಗ್ಯ ಸಂಸ್ಥೆ ಪ್ರಮಾಣೀಕರಣದ ಹೆಸರಿನಲ್ಲಿ ಕೋಟ್ಯಾಂತರ ಜನರನ್ನು ದಾರಿತಪ್ಪಿಸಲು ಯತ್ನಿಸಿದ್ದಕ್ಕಾಗಿ ಬಾಬಾ ರಾಮದೇವ್ ಬಾಬಾ ಅವರನ್ನು ಬಂಧಿಸಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. ಇದನ್ನು ಅಂತರರಾಷ್ಟ್ರೀಯ ವಂಚನೆ ಎಂದು ಪರಿಗಣಿಸಬೇಕು. ಇದಕ್ಕಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾವು ನೋಡಬೇಕಾಗಿದೆ "ಎಂದು ಅವರು ಟ್ವಿಟರ್ ನಲ್ಲಿ ಹೇಳಿದ್ದಾರೆ. ಈ ತಿಂಗಳ 19 ರಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹಾಗೂ ಮತ್ತೊಬ್ಬ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಬಾಬಾ ರಾಮದೇವ್ ಕೊರೊನಿಲ್ ಔಷಧಿಯನ್ನು ಬಿಡುಗಡೆ ಮಾಡಿದ್ದರು. ತಮ್ಮ ಔಷಧ ಉತ್ಪನ್ನ ದೃಢೀಕೃತಗೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣಪತ್ರ ಹೊಂದಿದೆ ಎಂದು ರಾಮದೇವ್ ಘೋಷಿಸಿದ್ದರು ಆದರೆ, ಈ ಬಗ್ಗೆ ಯಾವುದೇ ಪ್ರಮಾಣಪತ್ರ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದೆ.