ಕುಂಬಳೆ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಸಿರಿಚಂದನ ಯುವ ಬಳಗ ಕಾಸರಗೋಡು ನೇತೃತ್ವದಲ್ಲಿ ಸೂರಂಬೈಲಿನಲ್ಲಿ ನಡೆಯುತ್ತಿರುವ ಎರಡು ತಿಂಗಳ ಯಕ್ಷಗಾನ ನಾಟ್ಯ ತರಬೇತಿ ಶಿಬಿರದ ಅಂಗವಾಗಿ ವಿದುಷಿಃ ವಿದ್ಯಾಲಕ್ಷ್ಮೀ ಹಾಗೂ ಶಿಷ್ಯವೃಂದದವರಿಂದ ಭರತನಾಟ್ಯ ಪ್ರಾತ್ಯಕ್ಷಿಕೆ ಇತ್ತೀಚೆಗೆ ನಡೆಯಿತು.
ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದ ವಿದುಷಿಃ ವಿದ್ಯಾಲಕ್ಷ್ಮೀ ಅವರು ಅಡವು ಮತ್ತು ಹೆಜ್ಜೆಗಳ ನಡುವಿನ ಸಾಮ್ಯತೆಯನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು. ಶಾಸ್ತ್ರೀಯ ನೃತ್ಯಗಳಲ್ಲಿ ಮೂರು ಮುಖ್ಯ ಭಾಗಗಳಿದ್ದು ನೃತ್ತ, ನೃತ್ಯ ಹಾಗೂ ನಾಟ್ಯಗಳೆಂದು ಅವುಗಳನ್ನು ಗುರುತಿಸಲಾಗುತ್ತದೆ. ನೃತ್ತದ ಆಧಾರ ಅಡವು. ಕನ್ನಡ, ತಮಿಳಿನ ಆಡು ಪದದ ಅರ್ಥ ನರ್ತಿಸು ಎಂದಾದರೆ ತೆಲುಗಿನ ಅಡಗು ಎಂದರೆ ಹೆಜ್ಜೆ ಎಂದರ್ಥ. ಅಡವು ಎಂದರೆ ತಾಳ-ಲಯಗಳಿಂದ ಕೂಡಿದ ಅಂಗಾಂಗಗಳ ಮನೋಹರ ಕ್ರಮಬದ್ದ ಚಲನೆ. ನೃತ್ಯದ ಪಾರಿಭಾಷಿಕ ಪದವಾದ ಅಡವು ನೃತ್ಯದಲ್ಲಿ ಮೂಲಭೂತವಾದ ಚಲನೆ. ಇದನ್ನೇ ಯಕ್ಷಗಾನದಲ್ಲಿ ಹೆಜ್ಜೆ ಎಂಬ ಪದದಿಂದ ಬಳಸುತ್ತಾರೆ ಎಮದು ಅವರು ವಿವರಣೆ ನೀಡಿದರು.
ನೃತ್ಯದಲ್ಲಿ ಅಡವಿನಷ್ಟೇ ಪ್ರಾಮುಖ್ಯವನ್ನು ಹಸ್ತಭೇದಗಳಿಗೆ ನೀಡಿದರೆ3, ಯಕ್ಷಗಾನದಲ್ಲಿ ವಾಚಿಕಾಭಿನಯದ ಮೂಲಕ ಸಾತ್ವಿಕಾಭಿನಯನವನ್ನು ಅಂದರೆ, ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸಲಾಗುತ್ತದೆ. ಇಲ್ಲಿ ಪಾದ ಚಲನೆ ಅಧಿಕವಾಗಿರುತ್ತದೆ. ಆದ್ದರಿಂದ ಹೆಜ್ಜೆ ಎಂಬ ಹೆಸರು ಅಡವಿಗೆ ಸರಿಸಮಾನವಾಗಿದೆ ಎಂದ ಅವರು ಎಲ್ಲಾ ಕಲೆಗಳಿಗೂ ನಾಟ್ಯಶಾಸ್ತ್ರವೇ ಮೂಲಧಾರ ಎಂದು ನುಡಿದರು.
ವಿದುಷಿಃ ಮೇಘನಾ ಸೂರಂಬೈಲು, ಅಶ್ವಿನಿ ಭಟ್, ಧನ್ಯಾ ರಾಘವ್, ಶ್ರೀಪಂಚಮಿ ನೀರೋಳು, ಮಾಸ್ಟರ್ ಸಾತ್ವಿಕ್ ನೀರೋಳು, ಮಾಸ್ಟರ್ ಪ್ರಣವ್ ನೀರೋಳು ಹಾಗೂ ಸುಪ್ರಿತಾ ಸುಧೀರ್ ರೈ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಯಕ್ಷಗಾನ ನಾಟ್ಯಗುರು ದಿವಾಣ ಶಿವಶಂಕರ ಭಟ್, ಭಾಗವತಿಕೆಯಲ್ಲಿ ರೋಹಿಣಿ ದಿವಾಣ, ಶಿಬಿರದ ಸಂಚಾಲಕ ಕಾರ್ತಿಕ್ ಪಡ್ರೆ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.