ಕುಂಬಳೆ: ಕನ್ನಡ ಯು.ಪಿ-ಎಲ್.ಪಿ ರ್ಯಾಂಕ್ ಲಿಸ್ಟ್ ನಿಂದ ಕಳೆದ ಒಂದು ವರ್ಷದಿಂದ ಯಾವುದೇ ನೇಮಕಾತಿ ನಡೆಸದ ಕಾರಣ ಕಾಲಾವಧಿಯನ್ನು ವಿಸ್ತರಿಸಬೇಕೆಂದು ಕನ್ನಡ ಯು.ಪಿ-ಎಲ್.ಪಿ ರ್ಯಾಂಕ್ ಲೀಸ್ಟ್ ಅಸೋಸಿಯೇಶನ್ ಆಗ್ರಹಿಸಿದೆ.
ಈ ಬಗ್ಗೆ ಶನಿವಾರ ಕುಂಬಳೆಯಲ್ಲಿ ನಡೆದ ಸಭೆಯಲ್ಲಿ ಕುಂಬಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಅಧ್ಯಕ್ಷತೆ ವಹಿಸಿದ್ದರು. ಕನ್ನಡಿಗರನ್ನು ನಿರಂತರವಾಗಿ ಅವಗಣಿಸುತ್ತಿರುವುದಕ್ಕೆ ಈವರೆಗೆ ನೇಮಕಾತಿ ಆದೇಶ ನೀಡದಿರುವುದು ನಿದರ್ಶನವಾಗಿದೆ. ವಿವಿಧ ಶಾಲೆಗಳಲ್ಲಿ ಯು.ಪಿ-ಎಲ್.ಪಿ ಕನ್ನಡ ಅಧ್ಯಾಪಕ ಹುದ್ದೆ ಖಾಲಿ ಇದ್ದರೂ, ನೇಮಕಾತಿ ನಡೆಸದೆ ಆ ಬಗ್ಗೆ ವಿದ್ಯಾಭ್ಯಾಸ ಇಲಾಖೆ ನಿರ್ಲಕ್ಷ್ಯ ಧೋರಣೆ ವಹಿಸಿದೆ. ಖಾಲಿಯಿರುವ ಅಧ್ಯಾಪಕ ಹುದ್ದೆಗೆ ಶೀಘ್ರ ನೇಮಕಾತಿ ಮಾಡದಿದ್ದಲ್ಲಿ ಹೋರಾಟದ ಮಾರ್ಗ ಅನುಸರಿಸಲಾಗುವುದೆಂದು ಪುಂಡರೀಕಾಕ್ಷ ಕೆ.ಎಲ್.ಎಚ್ಚರಿಕೆ ನೀಡಿದರು. ಕೇರಳ ಲೋಕಸೇವಾ ಆಯೋಗ ಮತ್ತು ವಿದ್ಯಾಭ್ಯಾಸ ಇಲಾಖೆ ಕನ್ನಡಿಗರ ತಾಳ್ಮೆ ಪರೀಕ್ಷಿಸುತ್ತಿದ್ದು ಜವಾಬ್ದಾರಿಯುತ ಕ್ರಮ ಅನುಸರಿಸದಿದ್ದರೆ ತೀವ್ರ ಪ್ರತಿಭಟನೆ ಎದುರಿಸಬೇಕಾದಿತೆಂದು ಅವರು ಈ ಸಂದರ್ಭ ತಿಳಿಸಿದರು.
ಹೋರಾಟದ ನೇತೃತ್ವ ನಿರ್ವಹಿಸಲು ಈ ಸಂದರ್ಭ ಸಮಿತಿ ರೂಪಿಸಲಾಯಿತು. ಅಧ್ಯಕ್ಷರಾಗಿ ಪುಂಡರೀಕಾಕ್ಷ ಕೆ.ಎಲ್., ಉಪಾಧ್ಯಕ್ಷರಾಗಿ ಶ್ರುತಿ ಕೆ.ಆರ್., ಕಾರ್ಯದರ್ಶಿಯಾಗಿ ದೇವೀಪ್ರಸಾದ್ ಕೆ., ಜೊತೆ ಕಾರ್ಯದರ್ಶಿಯಾಗಿ ಗೀತಾ ಪಿ., ಖಜಾಂಜಿಯಾಗಿ ಸುಜಿತ್ ಕುಮಾರ್ ಸಿ.ಎಚ್, ಸದಸ್ಯರಾಗಿ ಸಚಿತ ರೈ, ರೂಪಶ್ರೀ, ಗೀತಾಮಾಲಿನಿ ಸಿ.ಎಚ್,ಅನ್ನಪೂರ್ಣೇಶ್ವರಿ, ಉಷಾ ಎಂ., ಗಾಯತ್ರಿ ಎಸ್, ಪವಿಂತ ಮೊಂತೇರೊ, ವನಿತ, ಅನಿತಕುಮಾರಿ ಡಿ.,ಕವಿತ ಬಿ. ಅವರನ್ನು ಆಯ್ಕೆಮಾಡಲಾಯಿತು.
ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳಲ್ಲಿ ಅಧ್ಯಾಪಕ ಹುದ್ದೆಗಳನ್ನು ಗುರುತಿಸಲು ವಿವಿಧ ತಂಡಗಳಿಗೆ ಪಂಚಾಯತಿ ಮಟ್ಟದಲ್ಲಿ ಜವಾಬ್ದಾರಿಯನ್ನು ಹಂಚಲಾಯಿತು. ವಿದ್ಯಾಭ್ಯಾಸ ಇಲಾಖೆ ಮತ್ತು ಸರ್ಕಾರದ ವತಿಯಿಂದ ಯಾವುದೇ ಧನಾತ್ಮಕ ಪ್ರತಿಕ್ರಿಯೆ ಲಭ್ಯವಾಗದಿದ್ದರೆ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಗೀತಾ ಟೀಚರ್ ಸ್ವಾಗತಿಸಿ, ಕಾರ್ಯದರ್ಶಿ ದೇವೀ ಪ್ರಸಾದ್ ವಂದಿಸಿದರು.