ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ ಭೀಕರ ಹಿಮಪ್ರವಾಹವು ಪರ್ವತವೊಂದರಿಂದ ಮಿಲಿಯನ್ ಟನ್‌ಗಟ್ಟನೆ ಹಿಮ ಕುಸಿದು ಜಾರಿದ್ದರಿಂದ ಸಂಭವಿಸಿದ್ದೇ ವಿನಾ ಹಿಮನದಿ ಸ್ಫೋಟದಿಂದ ಅಲ್ಲ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.
ತೀವ್ರ ಹಾನಿಗೊಳಗಾದ ಚಮೋಲಿಯಲ್ಲಿನ ಪರಿಸ್ಥಿತಿ ಪರಿಶೀಲನೆಗೆಂದು ಸೋಮವಾರ ತೆರಳುವ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭಾನುವಾರ ಹಿಮಪಾತದ ಹೊಡೆತಕ್ಕೆ ಸಿಲುಕಿದ ಜಾಗಗಳಲ್ಲಿ ಅಂತಹ ಚಟುವಟಿಕೆಗಳು ನಡೆದಿರಲಿಲ್ಲ. ಈ ದುರ್ಘಟನೆಯನ್ನು ಅಭಿವೃದ್ಧಿ ವಿರೋಧಿ ದೃಷ್ಟಿಕೋನದಲ್ಲಿ ಕಟ್ಟಲು ಹೋಗಬೇಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ.
ಇಸ್ರೋ ವಿಜ್ಞಾನಿಗಳು ಮತ್ತು ಸೇನೆ ಹಾಗೂ ಇಂಡೋ-ಟಿಬೆಟ್ ಪೊಲೀಸ್ ವಿಭಾಗದ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಅವರು ಈ ಭೀಕರ ದುರಂತಕ್ಕೆ ನಿಖರ ಕಾರಣ ಏನಿರಬಹುದು ಎಂಬ ಬಗ್ಗೆ ಚರ್ಚಿಸಿದರು. ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಯಾವುದೇ ಹಿಮರಾಶಿ ಕಾಣಿಸುತ್ತಿರಲಿಲ್ಲ. ಕೇವಲ ಖಾಲಿ ಬೆಟ್ಟ ಮಾತ್ರ ಕಂಡುಬಂದಿತ್ತು ಎಂದು ಇಸ್ರೋ ಅಧಿಕಾರಿಗಳು ತಮಗೆ ಫೋಟೊಗಳನ್ನು ತೋರಿಸಿರುವುದಾಗಿ ರಾವತ್ ತಿಳಿಸಿದ್ದಾರೆ.
'ಬೆಟ್ಟದ ಮೇಲೆ ಏನೋ ಕಾಣುತ್ತಿತ್ತು. ಬಹುಶಃ ಭಾರಿ ಪ್ರಮಾಣದಲ್ಲಿ ಹಿಮ ಕುಸಿದು ಕೆಳಗೆ ಜಾರಿ ಬರಲು ಅದೇ ಮೂಲ ಕಾರಣವಾಗಿರಬಹುದು. ಇದರಿಂದ ರಿಶಿಗಂಗಾ ಮತ್ತು ಧೌಲಿ ಗಂಗಾ ನದಿಗಳಲ್ಲಿ ಇದ್ದಕ್ಕಿದ್ದಂತೆ ಪ್ರವಾಹ ಸೃಷ್ಟಿಯಾಗಿದೆ. ವಿಜ್ಞಾನಿಗಳ ಪ್ರಕಾರ ದುರ್ಘಟನೆ ನಡೆದ ಸ್ಥಳವು ಹಿಮಪಾತದ ಜಾಗವೇ ಅಲ್ಲ. ಪ್ರಾಥಮಿಕ ವರದಿಗಳ ಪ್ರಕಾರ ಖಂಡಿತವಾಗಿಯೂ ಇದು ಹಿಮನದಿ ಸ್ಫೋಟದಿಂದ ಉಂಟಾಗಿರುವುದಲ್ಲ' ಎಂದು ಹೇಳಿದ್ದಾರೆ.
ಸ್ಪಷ್ಟವಾಗಿ ಕಾಣುತ್ತಿದ್ದ ಖಾಲಿ ಬೆಟ್ಟದ ಒಂದು ಪ್ರಚೋದಕ ಜಾಗದಿಂದ ಲಕ್ಷಾಂತರ ಮೆಟ್ರಿಕ್ ಟನ್ ಹಿಮ ಜಾರಿಕೊಂಡು ಬಂದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದಿದ್ದಾರೆ.