ಮಂಗಳೂರು; ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ತಿಥಿ ಮಾಡುವಾಗ ಆತ ಜೀವಂತವಾಗಿ ಪ್ರತ್ಯಕ್ಷವಾದ ಘಟನೆ ನಡೆದಿದೆ. ವೈಕುಂಠ ಸಮಾರಾಧನೆ ದಿನವೇ ವ್ಯಕ್ತಿ ಮನೆಗೆ ವಾಪಸ್ ಆಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಗರ್ಡಾಡಿ ಗ್ರಾಮದ ಶ್ರೀನಿವಾಸ್ ತಿಥಿ ಮಾಡುವ ದಿನವೇ ಪ್ರತ್ಯಕ್ಷರಾಗಿದ್ದಾರೆ. ಜನವರಿ 26ರಂದು ಶ್ರೀನಿವಾಸ್ ನಾಪತ್ತೆಯಾಗಿದ್ದರು. ಕುಟುಂಬದವರು ಎಷ್ಟು ಹುಡುಕಿದರೂ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.
ಫೆಬ್ರವರಿ 3ರಂದು ಓಡಿಲ್ನಾಳ ಗ್ರಾಮದ ಕಲ್ಲುಂಜಕೆರೆಯಲ್ಲಿ ಅನಾಥ ಶವ ಪತ್ತೆಯಾಗಿತ್ತು. ಶವ ಸಂಪೂರ್ಣ ಕೊಳೆತು ಹೋಗಿದ್ದರಿಂದ ಗುರುತು ಸಹ ಸಿಕ್ಕಿರಲಿಲ್ಲ. ಅದು ಶ್ರೀನಿವಾಸ್ ಶವ ಎಂದು ಕುಟುಂಬದವರು ಅಂತ್ಯ ಸಂಸ್ಕಾರ ಮಾಡಿದ್ದರು.
ಅಂತ್ಯ ಸಂಸ್ಕಾರದ ಕಾರ್ಯಗಳೆಲ್ಲಾ ಮುಗಿದು ವೈಕುಂಠ ಸಮಾರಾಧನೆ ಏರ್ಪಡಿಸಿದ್ದರು. ಅಂದೇ ಶ್ರೀನಿವಾಸ್ ಮನೆಗೆ ವಾಪಸ್ ಆಗಿದ್ದಾರೆ. ಈಗ ಅಂತ್ಯ ಸಂಸ್ಕಾರ ಮಾಡಿದ ಶವ ಯಾರದ್ದು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಜ್ಯೋತಿಷಿ ಹೇಳಿದ್ದರು ಶ್ರೀನಿವಾಸ್ ನಾಪತ್ತೆಯಾದಾಗ ಕುಟುಂಬದವರು ಜ್ಯೋತಿಷಿಯೊಬ್ಬರನ್ನು ಭೇಟಿ ಮಾಡಿದ್ದರು. ಆಗ ಅವರು ಶ್ರೀನಿವಾಸ್ ಸತ್ತಿಲ್ಲ, ವಾಪಸ್ ಬರುತ್ತಾರೆ ಎಂದು ಹೇಳಿದ್ದರು.
ಆದರೆ, ಜ್ಯೋತಿಷಿ ಹೇಳಿ ಎಷ್ಟು ದಿನ ಕಳೆದರೂ ಶ್ರೀನಿವಾಸ್ ಮನೆಗೆ ವಾಪಸ್ ಆಗಿರಲಿಲ್ಲ. ಆಗ ಸಿಕ್ಕ ಅನಾಥ ಶವದ ಅಂತ್ಯ ಸಂಸ್ಕಾರ ಮಾಡಲಾಗಿತ್ತು.