ವಿಶ್ವಸಂಸ್ಥೆ: ಮಾರಕ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಿರತವಾಗಿರುವ ವಿಶ್ವ ಆರೋಗ್ಯ ಸಂಸ್ಥೆ ತಾನು ಆರಂಭಿಸಿರುವ 'ಕೊವ್ಯಾಕ್ಸ್' ಲಸಿಕೆ ನೀಡಿಕೆ ಯೋಜನೆಯ ಪಟ್ಟಿ ಬಿಡುಗಡೆ ಮಾಡಿದ್ದು, ಜಗತ್ತಿನಲ್ಲಿ ಅತೀ ಹೆಚ್ಚು ಲಸಿಕೆ ವಿತರಣೆ ಮಾಡಿರುವ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ.
ಮಾರಕ ಕೊರೋನಾ ವೈರಸ್ ಗೆ ಲಸಿಕೆಗಳು ಸಿದ್ಧವಾಗುತ್ತಿದ್ದಂತೆಯೇ ಶ್ರೀಮಂತ ರಾಷ್ಟ್ರಗಳು ಲಸಿಕೆ ಖರೀದಿಗೆ ದುಂಬಾಲು ಬಿದ್ದವು. ಇದರಿಂದ ಬಡ ಮತ್ತು ಮಧ್ಯಮ ರಾಷ್ಟ್ರಗಳು ಲಸಿಕೆ ಪಡೆಯುವ ರೇಸ್ ನಲ್ಲಿ ಹಿಂದೆ ಬಿದ್ದವು. ಇದೇ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ದೊರೆಯಬೇಕು ಎಂಬ ಸದುದ್ದೇಶದಿಂದ ವಿವಿಧ ಲಸಿಕೆ ತಯಾರಿಕಾ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡು 'ಕೊವ್ಯಾಕ್ಸ್' ಲಸಿಕೆ ನೀಡಿಕೆ ಯೋಜನೆ ಆರಂಭಿಸಿದೆ. ಅದರಂತೆ ಜಗತ್ತಿನ ಬಡರಾಷ್ಟ್ರಗಳೂ ಸೇರಿದಂತೆ ಜಗತ್ತಿನ ಮೂಲೆ ಮೂಲೆಗೆ ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದಲ್ಲಿ ಕೋವಿಡ್ ಲಸಿಕೆಗಳು ಸರಬರಾಜಾಗುತ್ತಿದೆ. ಈ ಯೋಜನೆಯಲ್ಲಿ ಭಾರತ ನಿರ್ಣಾಯಕ ಪಾತ್ರವಹಿಸಿದ್ದು, ಪ್ರಸ್ತುತ ಸರಬರಾಜಾಗುತ್ತಿರುವ ಒಟ್ಟಾರೆ ಕೋವಿಡ್ ಲಸಿಕೆಗಳ ಪ್ರಮಾಣದಲ್ಲಿ ಭಾರತದ್ದೇ ಸಿಂಹಪಾಲು.
ಅಲ್ಲದೆ ಭಾರತ ಸರ್ಕಾರ ಕೂಡ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಮಾಲ್ಡೀವ್ಸ್, ಬ್ರೆಜಿಲ್ ಸೇರಿದಂತೆ ನಾನಾ ದೇಶಗಳಿಗೆ ಲಸಿಕೆ ಸರಬರಾಜು ಮಾಡುತ್ತಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ಸದಸ್ಯ ರಾಷ್ಟ್ರಗಳಿಗೆ ಕೋವಿಡ್ ಲಸಿಕೆಗಳು ಸರಬರಾಜು ಆಗುತ್ತಿದೆ. ಭಾರತದ ಈ ನಡೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ, ಭಾರತದ ನಡೆಯಿಂದ ಕೋಟ್ಯಂತರ ಜನರಿಗೆ ಅನುಕೂಲವಾಗುತ್ತಿದೆ ಎಂದು ಹೇಳಿತ್ತು.
ಲಸಿಕೆ ವಿತರಣೆಯಲ್ಲಿ ಭಾರತಕ್ಕೆ ಅಗ್ರ ಸ್ಥಾನ
ಕೊವಿಡ್ ಲಸಿಕೆ ನೀಡಿಕೆ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಹಂಚಿಕೊಂಡಿದ್ದು, ಈ ವರೆಗೂ ಜಗತ್ತಿನಾದ್ಯಂತ 337.2 ಮಿಲಿಯನ್ ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಜಗತ್ತಿನ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ.3.3 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಕೊವ್ಯಾಕ್ಸ್ ಹೇಳಿದೆ. ಅಂತೆಯೇ ಅತೀ ಹೆಚ್ಚು ಡೋಸ್ ಗಳ ಕೋವಿಡ್ ಲಸಿಕೆ ವಿತರಣೆ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದು, ಭಾರತದಲ್ಲಿ ಒಟ್ಟು 97.2 ಮಿಲಿಯನ್ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.
ಉಳಿದಂತೆ ಪಾಕಿಸ್ತಾನ (17.2 ಮಿಲಿಯನ್ ಡೋಸ್), ನೈಜೀರಿಯಾ (16 ಮಿಲಿಯನ್ ಡೋಸ್), ಇಂಡೋನೇಷ್ಯಾ (13.7 ಮಿಲಿಯನ್ ಡೋಸ್), ಬಾಂಗ್ಲಾದೇಶ (12.8 ಮಿಲಿಯನ್ ಡೋಸ್) ಮತ್ತು ಬ್ರೆಜಿಲ್ (10.6 ಮಿಲಿಯನ್ ಡೋಸ್), ಇಥಿಯೋಪಿಯಾ (8.9 ಮಿಲಿಯನ್ ಡೋಸ್), ಕಾಂಗೋ (6.9 ಮಿಲಿಯನ್ ಡೋಸ್), ಮೆಕ್ಸಿಕೊ (6.5 ಮಿಲಿಯನ್ ಡೋಸ್), ಫಿಲಿಪೈನ್ಸ್ (5.6 ಮಿಲಿಯನ್ ಡೋಸ್) ಮತ್ತು ಈಜಿಪ್ಟ್ (5.1 ಮಿಲಿಯನ್ ಡೋಸ್) ಲಸಿಕೆ ವಿತರಣೆ ಮಾಡಲಾಗಿದೆ. ಅಂತೆಯೇ ದಕ್ಷಿಣ ಕೊರಿಯಾ (2.6 ಮಿಲಿಯನ್ ಡೋಸ್), ಕೆನಡಾ (1.9 ಮಿಲಿಯನ್) ಮತ್ತು ನ್ಯೂಜಿಲೆಂಡ್ (250,000 ಡೋಸ್) ಸೇರಿದಂತೆ ಕೆಲವು ಶ್ರೀಮಂತ ದೇಶಗಳು ಕೂಡ ಈ ಪಟ್ಟಿಯಲ್ಲಿವೆ.
ವಿಶ್ವ ಆರೋಗ್ಯ ಸಂಸ್ಥೆಯ ಕೊವ್ಯಾಕ್ಸ್ ಯೋಜನೆಯಡಿಯಲ್ಲಿ ಜಗತ್ತಿನ ಸುಮಾರು 190 ರಾಷ್ಟ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ. 2021 ಅಂತ್ಯದ ಹೊತ್ತಿಗೆ ಜಗತ್ತಿನ ಶೇ.20ರಷ್ಟು ಜನರಿಗೆ ಲಸಿಕೆ ನೀಡುವುದು ಕೊವ್ಯಾಕ್ಸ್ ಯೋಜನೆಯ ಗುರಿಯಾಗಿದೆ.