ನವದೆಹಲಿ: ಜಗತ್ತಿನಲ್ಲಿ ಕೋವಿಡ್-19 ಸೋಂಕಿತರಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಸೋಂಕು ತೀವ್ರ ವೇಗದಲ್ಲಿ ಇಳಿಮುಖವಾಗುತ್ತಿದ್ದು, ಈಗ ಜನಜೀವನ ಸಹಜ ಸ್ಥಿತಿಗೆ ಕ್ಷಿುರಳುತ್ತಿದೆ. ಸೋಂಕಿನ ಪ್ರಕರಣಗಳು ಸತತವಾಗಿ ಕಡಿಮೆಯಾಗುತ್ತಿರುವುದರಿಂದ ಗ್ರಾಹಕರ ಖರೀದಿ ಭರಾಟೆ ಜಾಸ್ತಿಯಾಗಿದ್ದು ಶಾಪಿಂಗ್ ಮಾಲ್‌ಗಳಲ್ಲಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಹೆಚ್ಚು ಜನ ಭಯವಿಲ್ಲದೆ ಓಡಾಡುತ್ತಿರುವುದು ಕಂಡುಬರುತ್ತಿದ್ದಾರೆ. ಬಹುತೇಕ ಅಂಗಡಿಗಳು ಜನರಿಂದ ಗಿಜಿಗುಡತೊಡಗಿವೆ. ಸಲೂನ್‌ಗಳು ಮತ್ತು ಹೋಟೆಲ್‌ಗಳಿಗೆ ಕೂಡ ಜನರ ಭೇಟಿ ಜಾಸ್ತಿಯಾಗುತ್ತಿದೆ.
ಭಾರತದಾದ್ಯಂತ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದು ಸ್ವತಃ ವಿಜ್ಞಾನಿಗಳನ್ನು ಕೂಡ ಅಚ್ಚರಿಗೊಳಿಸಿದೆ. ಹಲವು ದೇಶಗಳು ಕರೊನಾದ ಎರಡನೇ, ಮೂರನೇ ಹಾಗೂ ನಾಲ್ಕನೇ ಅಲೆಯನ್ನು ಕಷ್ಟಪಟ್ಟು ಎದುರಿಸುತ್ತಿರುವಾಗ ಭಾರತ ಹೇಗೆ ಚೇತರಿಸಿಕೊಂಡಿತು ಎನ್ನುವ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. 2020ರ ಸೆಪ್ಟೆಂಬರ್‌ನಲ್ಲಿ ನಿತ್ಯದ ಪ್ರಕರಣಗಳ ಸಂಖ್ಯೆ ಸುಮಾರು ಒಂದು ಲಕ್ಷದ ಹತ್ತಿರವಿದ್ದು ಕಳವಳ ಮೂಡಿತ್ತು. ಆದರೆ, ಸೋಂಕು ಹರಡುವ ಪ್ರಮಾಣ ಈಗ ಶೇಕಡ 90ರಷ್ಟು ಕುಸಿದಿದೆ. ದೈನಿಕ ಸಾವಿನ ಪ್ರಮಾಣವೂ ಸೆಪ್ಟೆಂಬರ್‌ನಲ್ಲಿ ಸಾವಿರಕ್ಕಿಂತ ಅಧಿಕ ಇದ್ದದ್ದು ಈಗ ನೂರಕ್ಕಿಂತ ಕಡಿಮೆಯಾಗಿದೆ.
ಕಡಿಮೆ ಪ್ರಮಾಣದ ಪರೀಕ್ಷೆ ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಸಾವಿನ ನಿಜವಾದ ಕಾರಣ ತಿಳಿಸದಿರುವ ಪ್ರವೃತ್ತಿಯಿಂದಾಗಿ ಅಂಕಿಸಂಖ್ಯೆಯಲ್ಲಿ ಈ ರೀತಿಯ ಇಳಿಕೆ ಕಂಡುಬರುತ್ತಿದೆ ಎನ್ನುವವರೂ ಇದ್ದಾರೆ. ಆದರೆ ಆ ವಾದಕ್ಕೆ ಯಾವುದೇ ಆಧಾರವನ್ನು ಅವರು ಒದಗಿಸುವುದಿಲ್ಲ. ಭಾರತೀಯರಲ್ಲಿ ಜನ್ಮತಃ ಇರುವ ರೋಗನಿರೋಧಕ ಶಕ್ತಿಯೇ ಇದಕ್ಕೆ ಕಾರಣ ಎಂದು ಅಭಿಪ್ರಾಯಡುವವರ ಸಂಖ್ಯೆ ಹೆಚ್ಚಾಗಿದೆ.