ಬೆಂಗಳೂರು: ಬೆಂಗಳೂರಿನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳಿಂದ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಯೊಳಗಿನ ಆರ್'ಟಿ-ಪಿಸಿಆರ್ ವರದಿಯನ್ನು ಹೊಂದಿರುವುದನ್ನು ಕಡ್ಡಾಯಗೊಳಿಸುವ ಜೊತೆಗೆ ನೆರೆ ರಾಜ್ಯಗಳಿಂದ ಬರುವವರಿಗೆ ಕೆಲ ಕಠಿಣ ಮಾರ್ಗಸೂಚಿಗಳನ್ನು ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.
ಕೇರಳದಿಂದ ಬಂದವರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದರೆ ಅವರ ಸ್ಯಾಂಪಲ್ ಅನ್ನು ಜೀನೋಮ… ಸೀಕ್ವೆನ್ಸಿಂಗ್‌ಗೆ ಒಳಪಡಿಸಲಾಗುತ್ತದೆ.
ಕೇರಳದಿಂದ ದಿನನಿತ್ಯ ಬಂದು ಹೋಗುವ ವಿದ್ಯಾರ್ಥಿಗಳಿದ್ದರೆ ಪ್ರತಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆ ನಡೆಸಬೇಕು. ಹಾಸ್ಟೆಲ್‌ನಲ್ಲಿ ಇರುವ ಕೇರಳದ ವಿದ್ಯಾರ್ಥಿಗಳು ಬಲವಾದ ಕಾರಣಗಳಿಲ್ಲದಿದ್ದರೆ ಆಗಾಗ ತಮ್ಮ ಮನೆಗೆ ಹೋಗಿ ಬರುವುದು ಸಲ್ಲದು ಎಂದು ಸ್ಪಷ್ಟಪಡಿಸಲಾಗಿದೆ.
ಜೊತೆಗೆ ಕೇರಳದಿಂದ ಬಂದು ಹೋಟೆಲ್, ರೆಸಾರ್ಟ್, ಹಾಸ್ಟೆಲ್, ಹೋಮ್ ಸ್ಟೇ ಮುಂತಾದ ಕಡೆ ಉಳಿದುಕೊಳ್ಳುವವರು 72 ಗಂಟೆಯೊಳಗಿನ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ.
ಕಳೆದ ಎರಡು ವಾರಗಳಲ್ಲಿ ರಾಜ್ಯಕ್ಕೆ ಕೇರಳದಿಂದ ಬಂದಿರುವವರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಬೆಂಗಳೂರಿನ ಅಪಾರ್ಟ್‌ಮೆಂಟ್, ವಸತಿ ಸಂಕೀರ್ಣಗಳಲ್ಲಿ ಕೇರಳದಿಂದ ಆಗಮಿಸಿರುವ ವ್ಯಕ್ತಿಯ 72 ಗಂಟೆಯ ಒಳಗಿನ ಹಾಗೂ ಏಳು ದಿನಗಳ ಸಿಂಧುತ್ವ ಇರುವ ನೆಗೆಟಿವ್ ಆರ್‌ಟಿಪಿಸಿಆರ್ ವರದಿ ಇರುವುದನ್ನು ಸಂಬಂಧಪಟ್ಟವರು ಖಾತ್ರಿಪಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.