ನವದೆಹಲಿ: ಭಾರತೀಯ ನೌಕಾಪಡೆಯಲ್ಲಿ ಸುಧೀರ್ಘ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್ ವಿರಾಟ್ ನ ಗುಜರಿ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಐಎನ್‌ಎಸ್ ವಿರಾಟ್ ನೌಕೆಯನ್ನು ಗುಜರಿಗೆ ಹಾಕುವ ಬದಲು ಅದನ್ನು ಯುದ್ಧ ಸ್ಮಾರಕ ಅಥವಾ ಮ್ಯೂಸಿಯಂ ಮಾಡುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಐಎನ್‌ಎಸ್ ವಿರಾಟ್ ನೌಕೆಯ ಗುಜರಿ ಪ್ರಕ್ರಿಯೆಗೆ ತಡೆ ನೀಡಿದೆ. ಅಲ್ಲದೆ ಕೇಂದ್ರ ಸರ್ಕಾರ ಮತ್ತು ಐಎನ್‌ಎಸ್ ವಿರಾಟ್ ನೌಕೆಯನ್ನು ಖರೀದಿಸಿ ಗುಜರಿ ಪ್ರಕ್ರಿಯೆಯ ಉಸ್ತುವಾರಿವಹಿಸಿರುವ ಶ್ರೀರಾಮ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಕಂಪನಿಯ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.
ಐಎನ್‌ಎಸ್ ವಿರಾಟ್‌ನ್ನು ಗುಜರಿಗೆ ಹಾಕದೇ ಅದನ್ನು 100 ಕೋಟಿ ರೂ.ಗೆ ಕೊಂಡು, ಅದನ್ನು ಕಡಲ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವುದಾಗಿ ಸುಪ್ರೀಂಕೋರ್ಟ್‌ಗೆ ಎನ್ವಿಟೆಕ್ ಮೆರೈನ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಆದರೆ ಗುಜರಿ ಪ್ರಕ್ರಿಯೆಗೆ ಚಾಲನೆ ನೀಡಿ ಈಗಾಗಲೇ ಹಲವು ದಿನಗಳು ಕಳೆದು ಹೋಗಿದ್ದು, ಯುದ್ಧ ಹಡಗಿನ ಬಹುತೇಕ ಭಾಗವನ್ನು ಈಗಾಗಲೇ ಕತ್ತರಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈಗ ಈ ಗುಜರಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಬೇಕಿದೆ.
ಐಎನ್‌ಎಸ್ ವಿರಾಟ್ ಹಿನ್ನಲೆ
1959ರಲ್ಲಿ ಬ್ರಿಟನ್‌ನ ರಾಯಲ್ ನೇವಿಗೆ ಸೇರ್ಪಡೆಗೊಂಡ ಈ ಯುದ್ಧ ಹಡಗು 1986ರಲ್ಲಿ ಸೇವೆಯಿಂದ ನಿವೃತ್ತಿಗೊಂಡಿತು. ಬಳಿಕ 1987ರಲ್ಲಿ ಭಾರತ ಈ ಹಡಗನ್ನು 65 ದಶಲಕ್ಷ ಡಾಲರ್‌ಗೆ ಖರೀದಿ ಮಾಡಿತ್ತು. 1987ರಿಂದ 2017ರವರೆಗೆ ಭಾರತೀಯ ನೌಕಾಸೇನೆಯಲ್ಲಿ ಸೇವೆ ಸಲ್ಲಿಸಿದ ಐಎನ್‌ಎಸ್ ವಿರಾಟ್ ಅನ್ನು 2017ರಲ್ಲಿ ಸೇವೆಯಿಂದ ನಿವೃತ್ತಿಗೊಳಿಸಲಾಯಿತು. ಭಾರತೀಯ ನೌಕಾಪಡೆಯೊಂದಿಗೆ ಸರಿಯಾದ ಸಮಾಲೋಚನೆಯ ನಂತರ ವಿರಾಟ್ ಅನ್ನು ಗುಜರಿಗೆ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರವು ಜುಲೈ 2019 ರಲ್ಲಿ ಸಂಸತ್ತಿಗೆ ತಿಳಿಸಿತ್ತು. ಇದೀಗ ಈ ಯುದ್ಧ ಹಡಗನ್ನು 38 ಕೋಟಿ ರೂ.ಗಳಿಗೆ ಖರೀದಿಸಿರುವ ಶ್ರೀರಾಮ್ ಗ್ರೂಪ್ ಎಂಬ ಸಂಸ್ಥೆ, ಇದನ್ನು ಗುಜರಿಗೆ ಹಾಕಿ, ಅದರ ಭಾಗಗಳನ್ನು ಮರುಬಳಕೆ ಮಾಡಲು ಮುಂದಾಗಿದೆ.
ಸದ್ಯ ಹಡಗುಗಳನ್ನು ಗುಜರಿಗೆ ಹಾಕುವ ವಿಶ್ವದ ಅತಿದೊಡ್ಡ ಹಡಗು ಕಟ್ಟೆ ಎಂಬ ಖ್ಯಾತಿ ಪಡೆದಿರುವ, ಗುಜರಾತ್‌ನ ಭಾವನಗರ್‌ನ ಅಲಾಂಗ್ ಬಂದರಿನಲ್ಲಿ ಐಎನ್‌ಎಸ್ ವಿರಾಟ್ ಗುಜರಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಇದೀಗ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗೆ ತಡೆ ನೀಡಲಾಗಿದೆ.