ಮಂಜೇಶ್ವರ: ಭಜನಾ ಮಂದಿರಗಳು ಸಮಾಜಕಟ್ಟುವ ಕೇಂದ್ರಗಳಾಗಬೇಕು. ಸಂಸ್ಕøತಿಯನ್ನು ಬಿತ್ತುವ ಕೇಂದ್ರಗಳಾಗಬೇಕು. ಭಾಷಾ ಸಾಮರಸ್ಯಕ್ಕೆ ಕಾಸರಗೋಡಿನ ಕೊಡುಗೆ ಅಪಾರ. ಕಾಸರಗೋಡಿನ ಕನ್ನಡಿಗರ ಹಿತ ಕಾಪಾಡಲು ಕರ್ನಾಟಕ ಸರ್ಕಾರ ಸದಾ ಕಟಿಬದ್ಧವಾಗಿದೆ. ನಮ್ಮ ಶ್ರದ್ಧಾಕೇಂದ್ರಗಳ ಮುಂಭಾಗದಲ್ಲಿ ಭಗವಾಧ್ವಜ ಹಾರಾಡುವ ಕಲ್ಪನೆ ಅಮೋಘವಾದದ್ದು ಎಂದು ಕರ್ನಾಟಕ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮೀಯಪದವು ಅಯ್ಯಪ್ಪ ಭಜನಾ ಮಂದಿರದ ಪ್ರವೇಶ ಮತ್ತು ಸ್ವರ್ಣಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾ ಮಹೋತ್ಸವ ಸಮಾರಂಭದಲ್ಲಿ ನೂತನ ಮಂದಿರವನ್ನು ಭಗವಾಧ್ವಜ ಹಾರಿಸುವ ಮೂಲಕ ಲೋಕಾರ್ಪಣೆ ಗೈದು ಸಚಿವರು ಮಾತನಾಡುತ್ತಿದ್ದರು.
ಎಳೆಯಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ನೀಡಬೇಕು-ಕತ್ತಲ್ಸಾರ್:
ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸಗೈದು ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಅವರು, ಎಳೆಯಮಕ್ಕಳಿಗೆ ಬಾಲ್ಯದಲ್ಲಿ ತಾಯಂದಿರು ಮನೆಮನೆಗಳಲ್ಲಿ ಸಂಸ್ಕಾರ ನೀಡಬೇಕು, ನಮ್ಮ ಶ್ರದ್ಧಾಕೇಂದ್ರಗಳಿಗೆ ಬರುವಾಗ ಕಡ್ಡಾಯ ಸಭ್ಯ ವಸ್ತ್ರ ಸಂಹಿತೆ ಪಾಲಿಸಬೇಕು, ಮನೆಮನೆಗಳಲ್ಲಿ ಭಜನೆ ಜರಗುವಂತಾಗಬೇಕು, ನಾಲಗೆ ಕೇವಲ ತೀಟೆ ತೀರಿಸುವ ರಸನೇಂದ್ರಿಯವಾಗಿರದೆ ವಾಗೀಂದ್ರಿಯವಾಗಬೇಕು. ಶಬರಿಮಲೆ ಯಾತ್ರಿಕರು ಪೂರ್ಣಪ್ರಮಾಣದ ಒಂದು ಮಂಡಲ ವೃತನಿಷ್ಟರಾಗಬೇಕು, ನೂರೆಂಟು ಶರಣು ಕಡ್ಡಾಯ ದಿನನಿತ್ಯ ಕರೆಯಬೇಕು, ಜೀವನ ಪೂರ್ತಿ ದುಶ್ಚಟಮುಕ್ತ ಬದುಕು ಸಾಗಿಸಿ ಸಮಾಜದಲ್ಲಿ ಅನುಕರಣಾರ್ಹ ಬದುಕು ಸಾಗಿಸುವಂತಾಗಬೇಕು ಎಂದು ಅವರು ತಿಳಿಸಿದರು.
ತುಳು ಎಂಟನೇ ಪರಿಚ್ಚೇದಕ್ಕೆ ಸೇರಲಿ: ಒಡಿಯೂರು ಶ್ರೀ
ದಿವ್ಯ ಉಪಸ್ಥಿತರಿದ್ದು ಆಶೀರ್ವಚನಗೈದ ಇಡಿಯೂರು ಶ್ರೀಗುರು ದೇವದತ್ತ ಸಂಸ್ಥಾನದ ಶ್ರೀಗುರು ದೇವಾನಂದ ಸ್ವಾಮೀಜಿ ಅವರು, ನಾವೆಲ್ಲ ತುಳುವರು, ತೌಳವ ಮಾತೆಯ ಮಕ್ಕಳು, ತುಳುಭಾಷೆ ಎಂಟನೇ ಪರಿಚ್ಚೇದಕ್ಕೆ ಸೇರಲಿ, ಅದಕ್ಕಾಗಿ ನಾವೆಲ್ಲ ಒಕ್ಕೊರಲಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಬೇಕಿದೆ ಎಂದರು. ಸತ್ಯ ಇದ್ದಲ್ಲಿ ನೆಮ್ಮದಿ ಇದೆ, ಭಜನೆ ದೇವರ ನಾಮಸ್ಮರಣೆಯಿಂದ ನಾವೆಲ್ಲ ಸತ್ಯವಂತರಾಗಿ ಬದುಕೋಣ ಎಂದು ತಿಳಿಸಿದರು.
ಇನ್ನೋರ್ವ ಯತಿ ಶ್ರೀಧಾಮ ಮಾಣಿಲದ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ ಶುಭ ಹಾರೈಸಿದರು.
ಅಯ್ಯಪ್ಪ ಸೇವಾಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕುಸುಮೋದರ ಡಿ ಶೆಟ್ಟಿ ದಡ್ಡಂಗಡಿ ಚೆಲ್ಲಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಭೆಯಲ್ಲಿ ಗುರುಸ್ವಾಮಿ ಗೋವಿಂದನ್ ನಾಯರ್ ಕಾಂಞಂಗಾಡ್ ರವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು.
ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಧರ ರಾವ್ ಆರ್ ಎಂ,ಕಾರ್ಯಾಧ್ಯಕ್ಷ ಸುಬ್ಬಣ್ಣ ಆಳ್ವ ಬಾನಬೆಟ್ಟು ಉಪಸ್ಥಿತರಿದ್ದರು. ಗೀತಾ ಎಸ್.ಎನ್.ಭಟ್ ಚಿಗುರುಪಾದೆ ಸನ್ಮಾನ ಪತ್ರವಾಚಿಸಿದರು. ಪುಷ್ಪರಾಜ ಶೆಟ್ಟಿ ತಲೇಕಳ ಗೋವಿಂದನ್ ನಾಯರ್ ಅವರ ಬಗ್ಗೆ ಕಿರುಪರಿಚಯ ನೀಡಿದರು.
ಕಾರ್ಯದರ್ಶಿ ರಾಜಾರಾಮ ರಾವ್ ಸ್ವಾಗತಿಸಿ, ಜಯಪ್ರಕಾಶ ಶೆಟ್ಟಿ ಅಂಗಡಿದಾರು ನಿರೂಪಿಸಿದರು. ಕೋಶಾಧಕಾರಿ ಸದಾಶಿವ ರಾವ್ ಟಿ ಡಿ ವಂದಿಸಿದರು. ಕುಮಾರಿ ಅನನ್ಯ ಹಾಗೂ ಅನುಜ್ಞಾ ಲಕ್ಷ್ಮಿ ಪ್ರಾರ್ಥನೆ ಗೈದರು.