ಕೋಝಿಕ್ಕೋಡ್: ಕೊಡಂಚೇರಿಯಲ್ಲಿ, ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಕೊಡಂಚೇರಿಯಲ್ಲಿ ಕಂಪನಿಯನ್ನು ನಡೆಸುತ್ತಿರುವ ಕಾಸರಗೋಡು ನಿವಾಸಿಯೊಬ್ಬರ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪಾಲವಯಲ್ ಮೂಲದ ಬಿನೀಶ್, ಅವರ ಪತ್ನಿ ಸಿನಿ, ಸಿನಿಯ ಸಹೋದರಿ ಮಿನಿ ಮತ್ತು ತಾಯಿ ರೋಸಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಹತಭಾಗ್ಯರು. ಸ್ಥಳೀಯ ಸಿಪಿಎಂ ಮುಖಂಡರು ಮತ್ತು ಇತರರು ಬಿನೀಶ್ ಅವರ ಕಂಪೆನಿಯನ್ನು ಮುಚ್ಚಿ ಕೊಡಂಚೇರಿಯನ್ನು ತೊರೆಯುವಂತೆ ಬೆದರಿಕೆ ಹಾಕಿದ್ದರಿಂದ ಆತ್ಮಹತ್ಯೆ ಯತ್ನಿಸಿರುವುದಾಗಿ ತಿಳಿದುಬಂದಿದೆ.
ಕೆಲವರು ತಮ್ಮ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ ಮತ್ತು ಸಂಸ್ಥೆಯನ್ನು ಮುಚ್ಚುವುದು ಅವರ ಉದ್ದೇಶ ಎಂದು ಆತ್ಮಹತ್ಯೆ ಪತ್ರ ಆರೋಪಿಸಿದೆ. ಬಿನೀಶ್ ಮತ್ತು ಅವರ ಕುಟುಂಬ ಕೊಡಂಚೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯೊಳಗೆ ರಕ್ತ ವಾಂತಿ ಮಾಡಿಕೊಂಡಿದ್ದರಿಂದ ನೆರೆಹೊರೆಯವರು ಬಿನೀಶ್ ಮತ್ತು ಅವರ ಕುಟುಂಬವನ್ನು ಆಸ್ಪತ್ರೆಗೆ ಕರೆದೊಯ್ದರು.
ಬಿನೇಶ್ ಅವರು ತಮ್ಮ ಕಂಪನಿಯಿಂದ ಇತ್ತೀಚೆಗೆ ಮೂವರನ್ನು ವಜಾಗೊಳಿಸಿದ್ದರು. ಇದರ ಹಿನ್ನೆಲೆಯಲ್ಲಿ ಕೆಲವರು ತಮ್ಮ, ತಮ್ಮ ಕುಟುಂಬ ಮತ್ತು ಸಂಸ್ಥೆಯ ವಿರುದ್ಧ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ ಮತ್ತು ಸ್ಥಳೀಯ ಸಿಪಿಎಂ ಮುಖಂಡರ ನೇತೃತ್ವದಲ್ಲಿ ಬೆದರಿಕೆ ಹೆಚ್ಚುತ್ತಿದೆ ಎಂದು ಸಿನಿ ಹೇಳಿದ್ದಾರೆ. ಸಿಪಿಎಂ ಮುಖಂಡರು ಯಾವುದಾದರೂ ಮಾದಕವಸ್ತುಗಳನ್ನು ನಮ್ಮ ಕಂಪೆನಿಗೆ ಅಥವಾ ಮನೆಗೆ ತಂದಿರಿಸಿ ಮಾದಕ ವಸ್ತು ಪ್ರಕರಣಗಳಲ್ಲಿ ಸಿಲುಕಿಸುವರೋ ಎಂಬ ಭಯವೂ ಇತ್ತು. ಜೀವನ ನಿರ್ವಹಣೆಗಿರುವ ಏಕೈಕ ಕಂಪೆನಿಯನ್ನು ಮುಚ್ಚಿಸುವ ಯತ್ನ ನಡೆಯುತ್ತಿದ್ದು, ಸಾವನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲ ಎಂದು ಸಿನಿ ಹೇಳಿದ್ದಾರೆ.