ತಿರುವನಂತಪುರ: ಕೋವಿಡ್ ಪರಿಸ್ಥಿತಿಯಲ್ಲಿ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಹೆಚ್ಚುವರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲು ಚುನಾವಣಾ ಆಯೋಗ ಮಾರ್ಗದರ್ಶನ ನೀಡಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಟೀಕಾರಂ ಮೀನಾ ಹೇಳಿದ್ದಾರೆ. ಕೇರಳದಲ್ಲಿ 15,730 ಹೆಚ್ಚುವರಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಹೆಚ್ಚುವರಿ ಮತದಾನ ಕೇಂದ್ರಗಳು ಸೇರಿದಂತೆ ರಾಜ್ಯದಲ್ಲಿ 40,771 ಬೂತ್‍ಗಳು ಇರಲಿವೆ.
ಅಸ್ತಿತ್ವದಲ್ಲಿರುವ ಮತದಾನ ಕೇಂದ್ರಗಳು ಇರುವ ಕಟ್ಟಡದಲ್ಲಿ ಹೆಚ್ಚುವರಿ ಬೂತ್ ಸ್ಥಾಪಿಸುವುದು ಮೊದಲ ಪರಿಗಣನೆಯಾಗಿದೆ. ಕೋವಿಡ್ ಪರಿಸ್ಥಿತಿಗಳು ಬಿಗಡಾಯಿಸಿದ ಸ್ಥಿತಿಯಲ್ಲಿದ್ದರೆ 200 ಮೀಟರ್ ವ್ಯಾಪ್ತಿಯೊಳಗೆ ತಾತ್ಕಾಲಿಕ ಬೂತ್ ಸ್ಥಾಪಿಸಬಹುದು ಎಂದು ಸೂಚಿಸಲಾಗಿದೆ.
ತಾತ್ಕಾಲಿಕ ಬೂತ್ ಗಳನ್ನು ಸಿದ್ಧಪಡಿಸುವಾಗ ಸರ್ಕಾರಿ ಕಟ್ಟಡಗಳಿಗೆ ಮೊದಲ ಆದ್ಯತೆ ನೀಡಬೇಕು. 200 ಮೀಟರ್ ವ್ಯಾಪ್ತಿಯೊಳಗೆ ಸರ್ಕಾರಿ ಕಟ್ಟಡ ಲಭ್ಯವಿಲ್ಲದಿದ್ದರೆ, ಖಾಸಗಿ ಕಟ್ಟಡವನ್ನು ಸ್ವಾಧೀನಪಡಿಸಿಕೊಳ್ಳಬಹುದು. ಆದರೆ ಈ ಕಟ್ಟಡಗಳಿಗೆ ಯಾವುದೇ ರಾಜಕೀಯ ಸಂಬಂಧವಿಲ್ಲ ಎಂದು ಜಿಲ್ಲಾಧಿಕಾರಿ ಖಚಿತಪಡಿಸಿಕೊಳ್ಳಬೇಕು.
ಹೆಚ್ಚುವರಿ ಮತದಾನ ಕೇಂದ್ರಗಳನ್ನು ಸ್ಥಾಪಿಸುವ ಮೊದಲು ಜಿಲ್ಲಾಧಿಕಾರಿ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಿ ಅವರ ಒಪ್ಪಿಗೆ ಪಡೆಯಬೇಕು. ಹೆಚ್ಚುವರಿ ಬೂತ್‍ಗಳ ತಯಾರಿಕೆಗೆ ಸಂಬಂಧಿಸಿದಂತೆ ಜನರಿಗೆ ವ್ಯಾಪಕ ಅರಿವಿನ ಪ್ರಚಾರ ನೀಡಬೇಕು. ಮತದಾನ ಕೇಂದ್ರಕ್ಕೆ ತಾತ್ಕಾಲಿಕ ಉಪಕರಣಗಳನ್ನು ಸಿದ್ಧಪಡಿಸುವ ವಿನ್ಯಾಸವನ್ನು ಕೇಂದ್ರ ಚುನಾವಣಾ ಆಯೋಗ ಒದಗಿಸಿದೆ. ಇದನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. ಹೆಚ್ಚುವರಿ ಬೂತ್‍ಗಳ ಕುರಿತು ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.