ನವದೆಹಲಿ: ಕೋವಿಡ್-19 ಲಸಿಕೆ ಪಡೆದುಕೊಂಡ ಬಳಿಕ ಸಂತೃಪ್ತರಾಗಿರಬೇಕು ಎಂದರ್ಥವಲ್ಲ, ಸೋಂಕು ತಡೆಗಟ್ಟುವ ಕ್ರಮಗಳನ್ನು ಈಗ ಮತ್ತು ಮುಂದಿನ ದಿನಗಳಲ್ಲಿ ಅನುಸರಿಸಬೇಕು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸೋಮವಾರ ಒತ್ತಿ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಅಧ್ಯಕ್ಷರೂ ಆಗಿರುವ ವರ್ಧನ್ ಅವರು, ವಿವಿಧ ಸಾರಿಗೆ ಸಂಘಗಳಲ್ಲಿ ಮಾಸ್ಕ್ ಮತ್ತು ಸಾಬೂನುಗಳ ವಿತರಣೆಯ ಅಧ್ಯಕ್ಷತೆ ವಹಿಸಿದ್ದರು ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.
'ಕೋವಿಡ್-19 ಚಟುವಟಿಕೆಗಳ ಭಾಗವಾಗಿ ಮಾಸ್ಕ್‌ಗಳನ್ನು ವಿತರಿಸುವ ಕಾರ್ಯಕ್ರಮದ ಉಪಕ್ರಮದ ಭಾಗವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದು ದೇಶಾದಾದ್ಯಂತ ವಿತರಣೆಗಳ ಸರಣಿಯ ಭಾಗವಾಗಿದೆ'. 'ಸೋಂಕಿನ ಹೆಚ್ಚಿನ ಸಾಧ್ಯತೆಗಳನ್ನು ಪರಿಗಣಿಸಿ ನಾವು ದೆಹಲಿಯಲ್ಲಿ ರೈಲ್ವೆ ನಿಲ್ದಾಣಗಳು, ತರಕಾರಿ ಮಂಡಿಗಳು ಮತ್ತು ಇತರ ಸ್ಥಳಗಳಲ್ಲಿ ಮಾಸ್ಕ್‌ಗಳನ್ನು ವಿತರಿಸಿದ್ದೇವೆ' ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
'ಸರ್ಕಾರವು ಈಗಾಗಲೇ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನವನ್ನು ಅನ್ನು ಪ್ರಾರಂಭಿಸಿದೆ. ಆದರೆ ಕೋವಿಡ್ ಲಸಿಕೆಯನ್ನು ಹೊಂದಿರುವುದರಿಂದ ನಾವು ಸಂತೃಪ್ತರಾಗಿರಬೇಕು ಎಂದರ್ಥವಲ್ಲ. ವಾಸ್ತವವಾಗಿ, ಕೋವಿಡ್ ಸೋಂಕು ತಡೆಗಟ್ಟುವ ಎಲ್ಲಾ ಕ್ರಮಗಳನ್ನು ಈಗ ಮತ್ತು ಮುಂದಿನ ದಿನಗಳಲ್ಲಿ ನಾವೆಲ್ಲರೂ ಅನುಸರಿಸಬೇಕು. ಇದನ್ನು ಪರಿಗಣಿಸಿಯೇ, ಸೋಂಕು ತಡೆಗಟ್ಟುವ ದೃಷ್ಟಿಕೋನದಿಂದ ಐಆರ್‌ಸಿಎಸ್ ಮಾಸ್ಕ್ ವಿತರಣೆಯನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ' ಎಂದು ಹೇಳಿದ್ದಾರೆ.
ಸಾರಿಗೆ ಚಾಲಕರು ಮತ್ತು ಸಹಾಯಕರು ದೇಶದಾದ್ಯಂತ ಪ್ರಯಾಣಿಸುತ್ತಾರೆ ಮತ್ತು ಸೋಂಕಿಗೆ ಗುರಿಯಾಗುತ್ತಾರೆ. ಐಆರ್‌ಸಿಎಸ್ ವಿತರಿಸುತ್ತಿರುವ ಮುಖಗವುಸುಗಳನ್ನು ಪಡೆದುಕೊಳ್ಳುವುದು ಅವರಿಗೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದ ಅವರು, ಕೋವಿಡ್-19 ಪರಿಸ್ಥಿತಿಯ ಕುರಿತು ಮಾತನಾಡಿ, ಭಾರತವು ವಿಶ್ವದಲ್ಲೇ ಅತಿ ಹೆಚ್ಚಿನ ಚೇತರಿಕೆ ದರವನ್ನು ಹೊಂದಿದೆ ಎಂದಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಕ್ಷೀಣಿಸುತ್ತಿದ್ದು, ಇಂದು ಅದು 1.48 ಲಕ್ಷದಷ್ಟಿದೆ. 2020 ಜನವರಿಯಲ್ಲಿ ಕೊರೊನಾ ವೈರಸ್ ಸೋಂಕು ಪರೀಕ್ಷಿಸಲು ಒಂದು ಪ್ರಯೋಗಾಲಯವನ್ನಷ್ಟೇ ಹೊಂದಿದ್ದ ನಾವೀಗ 2,373 ಲ್ಯಾಬ್‌ಗಳನ್ನು ಹೊಂದಿದ್ದೇವೆ. ದಿನಕ್ಕೆ ಒಂದು ದಶಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ನಮ್ಮಲ್ಲಿದೆ. ನಾವು 20 ಕೋಟಿ ಸಂಚಿತ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದೇವೆ. ಇದು 'ಇಡೀ ಸರ್ಕಾರ' ಮತ್ತು 'ಇಡೀ ಸಮಾಜ' ಒಳಗೊಳ್ಳುತ್ತಿರುವ ವಿಧಾನದ ಪರಿಣಾಮವಾಗಿದೆ' ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಭಾರತವು ಮುಖಗವುಸುಗಳು, ಪಿಪಿಇ ಕಿಟ್‌ಗಳು, ವೆಂಟಿಲೇಟರ್ ಇತ್ಯಾದಿಗಳ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿರುವುದು ಮಾತ್ರವಲ್ಲದೆ, ಈಗ ಅವುಗಳನ್ನು ರಫ್ತು ಮಾಡುವ ಸ್ಥಿತಿಯಲ್ಲಿದೆ. ದೇಶದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನದಲ್ಲಿ ಇದುವರೆಗೆ 58 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಲಸಿಕೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಮತ್ತು ವದಂತಿಗಳನ್ನು ಹರಡಲು ಅನೇಕ ಜನರು ಪ್ರಯತ್ನಿಸುತ್ತಿದ್ದಾರೆ. ಅಂತಹ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ನಾನು ಜನರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.