ಪುದುಚೆರಿ: ಪುದುಚೆರಿಯ ಲೆಫ್ಟಿನೆಂಟ್ ಗೌರ್ನರ್ ಹುದ್ದೆಯಿಂದ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ವಜಾಗೊಳಿಸಲಾಗಿದೆ.
ರಾಷ್ಟ್ರಪತಿ ಭವನದಿಂದ ಈ ಬಗ್ಗೆ ಅಧಿಕೃತ ಆದೇಶ ಪ್ರಕಟಗೊಂಡಿದ್ದು, ಹೊಸ ರಾಜ್ಯಪಾಲರ ನೇಮಕವಾಗುವವರೆಗೂ ತೆಲಂಗಾಣದ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಅವರಿಗೆ ಪುದುಚೆರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.
"ಪುದುಚೆರಿಯ ರಾಜ್ಯಪಾಲರ ಹುದ್ದೆಯನ್ನು ನಿರ್ವಹಿಸುವುದರಿಂದ ಕಿರಣ್ ಬೇಡಿ ಅವರನ್ನು ತಡೆಯಲಾಗಿದೆ. ಹೊಸ ರಾಜ್ಯಪಾಲರ ನೇಮಕವಾಗುವವರೆಗೆ ತೆಲಂಗಾಣದ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಅವರಿಗೆ ಪುದುಚೆರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ ಎಂದು ರಾಷ್ಟ್ರಪತಿ ಭವನ ಹೇಳಿಕೆ ಪ್ರಕಟಿಸಿದೆ.
ಪುದುಚೆರಿಯ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದಾಗ ಕೇಂದ್ರ ಸರ್ಕಾರ ರಾಜ್ಯಪಾಲರ ಬದಲಾವಣೆ ಮಾಡಿದೆ. ಪುದುಚೆರಿಯ ಅಭಿವೃದ್ಧಿಗೆ ಕೇಂದ್ರದ ಆಣತಿಯಂತೆ ಕಿರಣ್ ಬೇಡಿ ಅಡ್ಡಿ ಮಾಡುತ್ತಿದ್ದರು ಎಂಬುದು ಕಾಂಗ್ರೆಸ್ ನ ನಿರಂತರ ಆರೋಪವಾಗಿತ್ತು.
ಕಳೆದ ತಿಂಗಳು ಪುದುಚೆರಿಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಿದ್ದ ಇಬ್ಬರು ಶಾಸಕರು ಕಿರಣ್ ಬೇಡಿ ಅವರನ್ನು ರಾಜ್ಯಪಾಲರ ಹುದ್ದೆಯಿಂದ ತೆಗೆಯಬೇಕೆಂಬ ಬೇಡಿಕೆ ಮುಂದಿಟ್ಟಿದ್ದರು ಎನ್ನಲಾಗಿದೆ. ಪುದುಚೆರಿ ವಿಧಾನಸಭಾ ಚುನಾವಣೆಯ ಸನಿಹದಲ್ಲಿ ನಾಲ್ವರು ಕಾಂಗ್ರೆಸ್ ನಾಯಕರು ಕಾಂಗ್ರೆಸ್ ತೊರೆದಿದ್ದರು.