ಮಂಜೇಶ್ವರ: ಮಂಜೇಶ್ವರ ತಾಲೂಕು ಕೇಂದ್ರಕ್ಕೆ ಶೀಘ್ರದಲ್ಲೇ ನಿಧಿ ಮಂಜೂರು ಮಾಡಲಾಗುವುದು ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಮಂಜೇಶ್ವರ ತಾಲೂಕಿನ ಹೊಸಬೆಟ್ಟು, ಬಂಗ್ರ ಮಂಜೇಶ್ವರ, ಬಡಾಜೆ ಗ್ರಾಮಗಳು ಒಳಗೊಂಡಿರುವ ಹೊಸಬೆಟ್ಟು ಗುಂಪು ಗ್ರಾಮ ಕಚೇರಿಯ ನವೀಕೃತ ಸ್ಮಾರ್ಟ್ ಗ್ರಾಮ ಕಚೇರಿಯ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಹುಭಾಷಾ ಸಂಗಮ ಭೂಮಿಯಾಗಿರುವ ಈ ಪ್ರದೇಶದ ಮಹತ್ವವನ್ನು ಅರಿತುಕೊಂಡು ರಾಜ್ಯ ಸರ್ಕಾರ ಈ ನವೀಕೃತ ಕಚೇರಿಯನ್ನು ಒದಗಿಸಿದೆ. ಗ್ರಾಮ ಕಚೇರಿಗಳ ಮುಖಚರ್ಯೆಯನ್ನೇ ಬದಲಿಸುವ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಮಹಿಳಾ ಸಿಬ್ಬಂದಿಗಾಗಿ ಅಗತ್ಯದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದವರು ನುಡಿದರು.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮಂತೇರೋ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಸದಸ್ಯ ಎ.ಶಂಸೀನಾ, ಅಬ್ದುಲ್ ಹಮೀದ್, ವಾರ್ಡ್ ಸದಸ್ಯೆ ಜೈಬುನ್ನೀಸಾ ಹಸನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕಮಲಾಕ್ಷ ಕನಿಲ, ಬಿ.ವಿ.ರಾಜನ್, ಹಮೀದ್ ಹೊಸಂಗಡಿ, ಎಂ.ಮೊಯ್ದೀನ್, ಪದ್ಮನಾಭ ಕಡಪ್ಪುರ, ರಾಘವ ಚೇರಾಲ್, ಮನೋಜ್ ಕುಮಾರ್, ಟಿ.ವಿ. ಬಾಲಕೃಷ್ಣನ್, ಹರಿಶ್ಚಂದ್ರ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿ, ಮಂಜೇಶ್ವರ ತಹಶೀಲ್ದಾರ್ ಶಾಜುಮೋನ್ ಜೋಸೆಫ್ ವಂದಿಸಿದರು.