ಕಾಸರಗೋಡು: ಜಿಲ್ಲಾ ಪಂಚಾಯತ್ ನೀಡುವ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದು ಹಣಕಾಸು ಸಚಿವ ಥಾಮಸ್ ಐಸಾಕ್ ಕರೆ ನೀಡಿರುವರು.
ಅವರು ಕಾಸರಗೋಡು ಜಿಲ್ಲಾ ಪಂಚಾಯತ್ ನಲ್ಲಿ ಶನಿವಾರ ಮಂಡಿಸಲ್ಪಟ್ಟ ಅಭಿವೃದ್ಧಿ ಸೆಮಿನಾರ್‍ನಲ್ಲಿ ಆನ್‍ಲೈನ್‍ನಲ್ಲಿ ಸಮಾರೋಪ ಭಾಷಣ ಮಾಡುತ್ತಿದ್ದರು.
ಕಾಸರಗೋಡು ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ ಮತ್ತು ಹಸಿರಿನಂತಹ ಸಮಗ್ರ ಯೋಜನೆಗಳಿಗೆ ಗಮನ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು. ಶಾಲಾ ಮಕ್ಕಳಿಗೆ ಲ್ಯಾಪ್ ಟಾಪ್ ಒದಗಿಸುವ ವಿದ್ಯಾಶ್ರೀ ಮುಂತಾದ ಯೋಜನೆಗಳಿಗೆ ಜಿಲ್ಲಾ ಪಂಚಾಯಿತಿ ಮುಂದಾಗಬೇಕು. ದೀರ್ಘಾವಧಿಯ ದೃಷ್ಟಿಕೋನದಿಂದ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದು ಸಚಿವರು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಶಾಸಕ ಕೆ.ಎಸ್. ಕುಂಞÂ್ಞ ರಾಮನ್ ಮಾತನಾಡಿ ಜನರಪರ ಯೋಜನೆಯ ಕಾಲು ಶತಮಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಅಭಿವೃದ್ಧಿಯಲ್ಲಿನ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಕೃಷಿ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಸಹಾಯ ಮಾಡುವ ಯೋಜನೆಗಳನ್ನು ರೂಪಿಸಲು ಶಾಸಕ ಎಂ.ಸಿ ಕಮರುದ್ದೀನ್ ಕರೆ ನೀಡಿದರು. ಹಣಕಾಸು ಆಯೋಗದ ಅಧ್ಯಕ್ಷ ಡಾ. ಎಸ್.ಎಂ.ವಿಜಯಾನಂದ್ ಮುಖ್ಯ ಭಾಷಣ ಮಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೃಷ್ಣನ್ ಕರಡು ಯೋಜನೆ ದಾಖಲೆಯನ್ನು ಮಂಡಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಶಕುಂತಲಾ, ಅಡ್ವ. ಎಸ್.ಎನ್. ಸರಿತಾ, ಶಿನೋಜ್ ಚಾಕೊ, ಸದಸ್ಯ ಸಿ.ಎಸ್ ಸಾಜಿತ್, ಬ್ಲಾಕ್ ಪಂಚಾಯತ್ ಅಧ್ಯಕ್ಷರು, ಯೋಜನಾ ಸಮಿತಿ ಸದಸ್ಯರು ಮತ್ತು ಕಾರ್ಯ ಸಮೂಹ ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಶಾನವಾಸ್ ಪಾದೂರು ಸ್ವಾಗತಿಸಿ, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ಎಸ್. ನಂದಕುಮಾರ್ ವಂದಿಸಿದರು. ಕಾರ್ಯನಿರತ ಗುಂಪಿನ ಸದಸ್ಯರ ಚರ್ಚೆಯನ್ನು ಕ್ರೋಡೀಕರಿಸಿ ಕೆ. ಬಾಲಕೃಷ್ಣನ್ ಮಾತನಾಡಿದರು.