ಮಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಿಂದ ಕೊಡಮಾಡುವ ಮಯೂರವರ್ಮ ಪ್ರಶಸ್ತಿ 2020 ನ್ನು ಮಂಗಳವಾರ ಬೆಂಗಳೂರಿನ ಸಾಹಿತ್ಯ ಪರಿಷತ್ ಮಂದಿರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ರಾದ ಡಾ. ಧನಂಜಯ ಕುಂಬ್ಳೆ ಇವರಿಗೆ ನಾಡೋಜ ಮನು ಬಳಿಗಾರ್, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಪ್ರದಾನ ಮಾಡಿದರು.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧನೆಯ ಆಧಾರದಲ್ಲಿ ಈ ಪ್ರಶಸ್ತಿಗೆ ಕುಂಬ್ಳೆ ಅವರು ಆಯ್ಕೆಯಾಗಿದ್ದರು.
ಪ್ರಶಸ್ತಿಯು 25 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಸನ್ಮಾನವನ್ನು ಒಳಗೊಂಡಿದೆ.
ಧನಂಜಯ ಕುಂಬ್ಳೆ ಇವರು ಕವಿತೆ, ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ ಮೊದಲಾದ ಪ್ರಕಾರಗಳಲ್ಲಿ ಹತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ. ಹಲವು ಕೃತಿಗಳ ಸಂಪಾದನೆಯನ್ನು ಮಾಡಿದ್ದಾರೆ. ಮೂಡುಬಿದಿರೆ ಆಳ್ವಾಸ್ ನುಡಿಸಿರಿಯ ಸಂಘಟನೆಯಲ್ಲಿ ಕಾರ್ಯದರ್ಶಿ ಯಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿ, ಯಕ್ಷಗಾನ ಕೇಂದ್ರ, ಕನಕದಾಸ ಸಂಶೋಧನ ಕೇಂದ್ರಗಳಲ್ಲಿ ಸಂಯೋಜಕರಾಗಿ ಕನ್ನಡ ನಾಡು ನುಡಿಯ ಚಟುವಟಿಕೆಗಳನ್ನು ನಡೆಸಿದ್ದಾರೆ.