ಕೊಚ್ಚಿ: ಭಾರತದ ಮೆಟ್ರೋ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಇ ಶ್ರೀಧರನ್ ಅವರು ರಾಜಕೀಯ ಪ್ರವೇಶ ಮಾಡಿದ್ದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಮೂಲಗಳ ಪ್ರಕಾರ ಶ್ರೀಧರನ್ ಅವರು, ಭಾನುವಾರದಿಂದ ಕೇರಳದಲ್ಲಿ ನಡೆಯಲಿರುವ ವಿಜಯ್ ಯಾತ್ರೆ ವೇಳೆ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಅಂತೆಯೇ ಶ್ರೀಧರನ್ ಮುಂಬರುವ ಕೇರಳ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
88 ವರ್ಷದ ಶ್ರೀಧರನ್ ಅವರು ಕೇರಳ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದ್ದು, ಅಧಿಕೃತ ಸೇರ್ಪಡೆಯ ನಂತರ ಈ ಬಗ್ಗೆ ನಿಖರ ಮಾಹಿತಿ ಲಭಿಸುವ ಸಾಧ್ಯತೆ ಇದೆ.
ಭಾರತದ 'ಮೆಟ್ರೋ ಮ್ಯಾನ್' ಎಂದೇ ಜನಪ್ರಿಯರಾಗಿರುವ ಶ್ರೀಧರನ್ ಅವರು 2011ರಲ್ಲಿ ದೆಹಲಿ ಮೆಟ್ರೋ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಇನ್ನು ದೇಶದ ಇತರ ಮೆಟ್ರೋ ಪ್ರಾಜೆಕ್ಟ್ʼಗಳಾದ ಜೈಪುರ, ಲಖನೌ ಮತ್ತು ಕೊಚ್ಚಿಯಲ್ಲಿ ಎಂಜಿನಿಯರ್ ಆಗಿಯೂ ಕೂಡ ಭಾಗಿಯಾಗಿದ್ದಾರೆ. 2001ರಲ್ಲಿ ಇವರಿಗೆ ಪದ್ಮಶ್ರೀ ಹಾಗೂ 2008ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಗೌರವ ಲಭಿಸಿದೆ.